ಛತ್ತೀಸ್ ಗಢದ ಅರ್ಧದಷ್ಟು ಜನರಿಗೆ ಪೌರತ್ವ ಸಾಬೀತುಪಡಿಸಲು ಸಾಧ್ಯವಾಗದು: ಸಿಎಂ ಭೂಪೇಶ್ ಬಾಘೇಲ್

Update: 2019-12-21 11:40 GMT

ರಾಯ್‍ ಪುರ್: ಛತ್ತೀಸ್ ಗಢದಲ್ಲಿ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಝನ್ಸ್ ಜಾರಿಯಾದರೆ ರಾಜ್ಯದ 2.80 ಕೋಟಿ ಜನಸಂಖ್ಯೆಯ ಪೈಕಿ ಅರ್ಧದಷ್ಟು ಜನರ ಬಳಿ ಭೂಮಿ ಅಥವಾ ಭೂದಾಖಲೆಗಳಿಲ್ಲದೇ ಇರುವುದರಿಂದ ಅವರು ತಮ್ಮ ಪೌರತ್ವ ಸಾಬೀತುಪಡಿಸಲು ಸಾಧ್ಯವಾಗದು ಎಂದು ರಾಜ್ಯದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಹೇಳಿದ್ದಾರೆ.

"ರಾಜ್ಯದ ಅರ್ಧದಷ್ಟು ಜನರ ಪೂರ್ವಜರು ಅನಕ್ಷರಸ್ಥರಾಗಿದ್ದರಿಂದ ಹಾಗೂ ವಿವಿಧ ಗ್ರಾಮಗಳು ಹಾಗೂ ರಾಜ್ಯಗಳಿಗೆ ವಲಸೆ ಹೋದವರಾಗಿರುವುದರಿಂದ ಅವರು ಕೂಡ ಪೌರತ್ವ ಸಾಬೀತುಪಡಿಸಲು ದಾಖಲೆಗಳನ್ನು ಹೊಂದಿಲ್ಲ. ಐವತ್ತರಿಂದ ನೂರು ವರ್ಷಗಳ ಹಿಂದಿನ ದಾಖಲೆಗಳನ್ನು ಅವರೆಲ್ಲಿಂದ ತರಲು ಸಾಧ್ಯ?'' ಎಂದು ಸಿಎಂ ಪ್ರಶ್ನಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, 1906ರಲ್ಲಿ ಮಹಾತ್ಮ ಗಾಂಧಿ ಆಫ್ರಿಕಾದಲ್ಲಿ ಬ್ರಿಟಿಷರ ಗುರುತು ಯೋಜನೆಯನ್ನು ವಿರೋಧಿಸಿದ ಹಾಗೆ ತಾನು ಎನ್‍ಆರ್‍ಸಿ ಪ್ರಕ್ರಿಯೆ ವಿರೋಧಿಸುವುದಾಗಿ ಹೇಳಿದ್ದಾರೆ.

"ಎನ್‍ಆರ್ ಸಿ ಜನರ ಮೇಲೆ ಅನಗತ್ಯ ಹೊರೆಯಾಗಿದೆ. ದೇಶದೊಳಗೆ ಹೊರದೇಶದವರು ನುಸುಳುವುದನ್ನು ತಡೆಯಲೆಂದು ಹಲವು ಏಜನ್ಸಿಗಳಿವೆ. ಈ ಏಜನ್ಸಿಗಳು ಕ್ರಮ ಕೈಗೊಳ್ಳಬಹುದು, ಕೇಂದ್ರವೇಕೆ ಜನಸಾಮಾನ್ಯರಿಗೆ ತೊಂದರೆಯುಂಟು ಮಾಡಬೇಕು?'' ಎಂದು ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News