ಗೋಲಿಬಾರ್‌ನಲ್ಲಿ ಬಲಿಯಾದವರು ಎಫ್‌ಐಆರ್‌ನಲ್ಲಿ ಆರೋಪಿಗಳು !

Update: 2019-12-22 04:54 GMT
ಅಬ್ದುಲ್ ಜಲೀಲ್, ನೌಶೀನ್

ಮಂಗಳೂರು, ಡಿ.21: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ಗುರುವಾರ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆ ಬಳಿಕ ಮಂಗಳೂರು ಪೊಲೀಸರು ನಡೆಸಿದ ಗೋಲಿಬಾರ್‌ಗೆ ಬಲಿಯಾದ ಇಬ್ಬರನ್ನು ಮಂಗಳೂರು ಉತ್ತರ (ಬಂದರ್) ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ವಾರ್ತಾ ಭಾರತಿಗೆ ಈ ಎಫ್‌ಐಆರ್‌ ನ ಪ್ರತಿ ಸಿಕ್ಕಿದೆ.

ಕಂದಕ್ ನಿವಾಸಿ ಅಬ್ದುಲ್ ಜಲೀಲ್, ಕುದ್ರೋಳಿ ನಿವಾಸಿ ನೌಶೀನ್ ಎಂಬವರು ಪೊಲೀಸರ ಗೋಲಿಬಾರ್‌ಗೆ ಬಲಿಯಾದವರು. ಈ ಇಬ್ಬರು ಸೇರಿದಂತೆ ಒಟ್ಟು 29 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದಲ್ಲಿ ಜಲೀಲ್ 3ನೇ ಹಾಗೂ ನೌಶೀನ್ 8ನೇ ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಡಿ.19ರಂದು ಸುದ್ದಿಗಾರರೊಂದಿಗೆ ಮಾತನಾಡಿ, ‘‘6,000ದಿಂದ 7,000 ಪ್ರತಿಭಟನಾಕಾರರು ಬಂದರ್ ಠಾಣೆಗೆ ಬೆಂಕಿ ಹಚ್ಚಿ ಪೊಲೀಸರ ಹತ್ಯೆಗೆ ಮುಂದಾಗಿದ್ದರು’’ ಎಂದು ತಿಳಿಸಿದ್ದರು. ಆದರೆ ಡಿಸಿಪಿಯವರು ಬಂದರ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿ ‘‘1,500ರಿಂದ 2,000 ಪ್ರತಿಭಟನಾಕಾರರು ಠಾಣೆಗೆ ಬೆಂಕಿ ಹಚ್ಚಲು ಮುಂದಾಗಿದ್ದರು’’ ಎಂದು ನಮೂದಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಾದ ಇನ್ನೊಂದು ಎಫ್‌ಐಆರ್‌ನಲ್ಲಿ 45 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಮಂಗಳೂರು ಘಟನೆಗಳ ಬಗ್ಗೆ ಈವರೆಗೆ 7 ಎಫ್ ಐ ಆರ್ ಗಳು ದಾಖಲಾಗಿದ್ದು, ಅವುಗಳಲ್ಲಿ 400 ಮಂದಿ ‘ಅಪರಿಚತರನ್ನು’ ಆರೋಪಿಗಳಾಗಿ ಮಾಡಲಾಗಿದೆ. ಮಂಗಳೂರು ಪೊಲೀಸ್ ಆಯುಕ್ತರು ನೀಡಿದ ಹೇಳಿಕೆ ಮತ್ತು ಡಿಸಿಪಿಯವರು ಬಂದರ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ನಲ್ಲಿನ ಮಾಹಿತಿಯಂತೆ ಪ್ರತಿಭಟನಾಕಾರರ ಸಂಖ್ಯೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದೆ. ಪ್ರಕರಣವನ್ನು ದಿನದಿಂದ ದಿನಕ್ಕೆ ತಿರುಚಲಾಗುತ್ತಿದೆ ಎನ್ನುವ ಆರೋಪವು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಎಫ್ಐ ಆರ್ ನಲ್ಲಿ ಜಲೀಲ್ ಹಾಗೂ ನೌಸೀನ್ ಅವರಿಬ್ಬರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದೂ ಹೇಳಲಾಗಿದೆ. ಆದರೆ ಅವರಿಬ್ಬರೂ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಮಾದ್ಯಮಗಳು ವರದಿ ಮಾಡಿದೆ. ಅಬ್ದುಲ್ ಜಲೀಲ್ ಅವರು ಶಾಲೆಯಿಂದ ಬರುವ ತನ್ನ ಇಬ್ಬರು ಮಕ್ಕಳಿಗಾಗಿ ಕಾಯುತ್ತಿದ್ದರು ಹಾಗು ನೌಶೀನ್ ಅವರು ತನ್ನ ದಿನಗೂಲಿ ಕೆಲಸದಿಂದ ಮನೆಗೆ ಮರಳುತ್ತಿದ್ದರು ಎಂದು ಅವರ ಕುಟುಂಬ ಮೂಲಗಳು ಹಾಗು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಮಾದ್ಯಮಗಳು ವರದಿ ಮಾಡಿದ್ದವು.

ಮುಖ್ಯಮಂತ್ರಿ ಯಡಿಯೂರಪ್ಪನವರು ಶನಿವಾರ ಮಂಗಳೂರಿನಲ್ಲಿ ಗೋಲಿಬಾರ್ ನಲ್ಲಿ ಮೃತಪಟ್ಟ ಕುಂಟುಂಬ ಸದಸ್ಯರನ್ನು ಭೇಟಿಯಾಗಿ ಅವರಿಗೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ ಬೆನ್ನಿಗೆ ಈ ಬೆಳವಣಿಗೆ ನಡೆದಿದೆ.

ಎಫ್‌ಐಆರ್‌ನಲ್ಲಿ ಏನಿದೆ?

‘‘ಡಿ.19ರಂದು ಸಂಜೆ 4:15ರಿಂದ 5:30ರ ಮಧ್ಯೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ 1,500ರಿಂದ 2,000 ಪ್ರತಿಭಟನಾಕಾರರು ನಿಷೇಧಾಜ್ಞೆ ಉಲ್ಲಂಘಿಸಿ ಮಾರಕಾಯುಧಗಳಿಂದ ಮಂಗಳೂರು ಉತ್ತರ ಠಾಣೆಗೆ ಬೆಂಕಿ ಹಚ್ಚಲು ಮತ್ತು ಪೊಲೀಸರನ್ನು ಕೊಲ್ಲುವ ಸಂಚು ನಡೆಸಿ ಅಕ್ರಮ ಕೂಟ ಸೇರಿದ್ದರು. ಪ್ರತಿಭಟನಾಕಾರರಲ್ಲಿ ಪಿಎಫ್ಐ,ಎಸ್ ಡಿ ಪಿಐ ಸಹಿತ ಇತರ ಮುಸ್ಲಿಂ ಸಂಘಟನೆಗಳ ಸದಸ್ಯರು ಇದ್ದರು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಠಾಣೆಗೆ ಎಸೆಯುತ್ತಿರುವ ಸಂದರ್ಭ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಶುಗಿರಿ ಮತ್ತು ಅಧಿಕಾರಿ/ಸಿಬ್ಬಂದಿ ಧಾವಿಸಿದರು. ಗಲಭೆ ನಿರತ ಗುಂಪಿಗೆ ಚದುರುವಂತೆ ಸೂಚನೆ ನೀಡಿದರೂ ಚದುರದೆ ಕಲ್ಲು ತೂರಾಟ ಮುಂದುವರಿಸಿದ್ದರು’’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ‘‘ಈ ಸಂದರ್ಭ ಪೊಲೀಸರು ಗಾಯಗೊಂಡ ಹಿನ್ನೆಲೆಯಲ್ಲಿ ಗಲಭೆಯನ್ನು ಹತ್ತಿಕ್ಕಲು ಮತ್ತು ಸಾವು-ನೋವು ಆಸ್ತಿ-ಪಾಸ್ತಿ ಹಾನಿ ತಡೆಯಲು ಗಾಳಿಯಲ್ಲಿ ಗುಂಡು ಹಾರಿಸಿದಾಗ ಗಲಭೆನಿರತರ ಪೈಕಿ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದರು. ಅಲ್ಲದೆ, ಇತರ ಐವರು ಗಾಯಗೊಂಡಿದ್ದರು. ಆರೋಪಿಗಳು ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಮಾರಕಾಯುಧದಿಂದ ಪೊಲೀಸರ ಕೊಲೆಯತ್ನಕ್ಕೆ ಮುಂದಾಗಿದ್ದರು’’ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. 

ಈ ಕುರಿತು ಮಂಗಳೂರು ನಗರ ಉತ್ತರ(ಬಂದರ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸದ ಕಮಿಷನರ್, ಡಿಸಿಪಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಯು ಪೊಲೀಸ್ ಆಯುಕ್ತ ಡಾ. ಪಿ.ಎಸ್.ಹರ್ಷ ಹಾಗೂ ಡಿಸಿಪಿ ಅರುಣಾಂಶುಗಿರಿ ಅವರನ್ನು ‘ವಾರ್ತಾಭಾರತಿ’ ದೂರವಾಣಿ ಮೂಲಕ ಹಲವು ಬಾರಿ ಸಂಪರ್ಕಿಸಲು ಯತ್ನಿಸಿತು. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News