ಪೇಜಾವರಶ್ರೀ ಸ್ಥಿತಿ ಇನ್ನೂ ಗಂಭೀರ

Update: 2019-12-22 08:58 GMT

ಉಡುಪಿ, ಡಿ.22: ನ್ಯುಮೋನಿಯ ಹಾಗೂ ಉಸಿರಾಟದ ತೊಂದರೆಗಾಗಿ ಶುಕ್ರವಾರ ಮುಂಜಾನೆ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಾಗಿರುವ ಪೇಜಾವರ ಮಠದ 89 ವರ್ಷದ ಹಿರಿಯ ಯತಿ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದ್ದರೂ, ಇನ್ನೂ ಗಂಭೀರವಾಗಿಯೇ ಇದೆ ಎಂದು ಕೆಎಂಸಿ ಆಸ್ಪತ್ರೆ ಇಂದು ಬೆಳಗ್ಗೆ ಬಿಡುಗಡೆಗೊಳಿಸಿದ ಬುಲೆಟಿನ್‌ನಲ್ಲಿ ತಿಳಿಸಿದೆ.

ಶನಿವಾರಕ್ಕೆ ಹೋಲಿಸಿದರೆ ಅವರ ದೈಹಿಕ ಆರೋಗ್ಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ತೀವ್ರವಾದ ಉಸಿರಾಟದ ತೊಂದರೆಗಾಗಿ ಡಿ.20ರ ಮುಂಜಾನೆ ಆಸ್ಪತ್ರೆಗೆ ದಾಖಲಾದ ಪೇಜಾವರಶ್ರೀಗೆ ಈಗಲೂ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈಗಲೂ ಕೃತಕ ಉಸಿರಾಟದ ಬೆಂಬಲ (ವೆಂಟಿಲೇಟರ್)ದಲ್ಲೇ ಇದ್ದಾರೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

‘ಸ್ವಾಮೀಜಿಯ ಎದೆಯಲ್ಲಿ ಕಟ್ಟಿದ್ದ ಕಫ ನಿಧಾನವಾಗಿ ಕರಗುತ್ತಿದೆ. ಆದರೆ ಚಿಕಿತ್ಸೆಗೆ ಅವರ ತೀರಾ ನಿಧಾನವಾಗಿ ಸ್ಪಂದಿಸುತಿದ್ದಾರೆ. ವಯಸ್ಸಿನ ಕಾರಣಕ್ಕಾಗಿ ಅವರಿಗೆ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸುಧಾ ವಿದ್ಯಾಸಾಗರ್ ನೇತೃತ್ವದ ವೈದ್ಯರ ತಂಡ ತಿಳಿಸಿದೆ.’ ಎಂದು ಸ್ವಾಮೀಜಿಯ ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ ತಿಳಿಸಿದ್ದಾರೆ. ಭಕ್ತರು ಆತಂಕ ಪಡಬೇಕಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಸಂಸ್ಕೃತ ವಿದ್ವಾಂಸ, ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು, ಅಷ್ಟ ಮಠಗಳ ಪೈಕಿ ಕೃಷ್ಣಾಪುರ ಹಾಗ ಪಲಿಮಾರು ಕಿರಿಯ ಯತಿಗಳು ಇಂದು ಆಸ್ಪತ್ರೆಗೆ ಭೇಟಿ ನೀಡಿ ಸ್ವಾಮೀಜಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಳೆದ ಮೂರು ದಿನಗಳಿಂದ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲೇ ಕಳೆಯುತ್ತಿದ್ದಾರೆ.

ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಹಾಗೂ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಶನಿವಾರ ರಾತ್ರಿ ಪೇಜಾವರಶ್ರೀಯನ್ನು ಭೇಟಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News