ಪೊಲೀಸರ ಮೃಗೀಯ ವರ್ತನೆ: ಪಿಎಫ್‌ಐ ಖಂಡನೆ

Update: 2019-12-22 12:42 GMT

ಮಂಗಳೂರು, ಡಿ.22: ಪೌರತ್ವ ಕಾಯಿದೆ ವಿರುದ್ಧ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಮಂಗಳೂರಿನಲ್ಲೂ ನಾಗರಿಕರು ಸ್ವಯಂಪ್ರೇರಿತರ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರ ಮೇಲೆ ಪೊಲೀಸ್ ಇಲಾಖೆ ಮುಗಿಬಿದ್ದು ರಾಕ್ಷಸೀಯ ವರ್ತನೆ ತೋರಿರುವುದು ಮತ್ತು ಗುಂಡುಹಾರಿಸಿ ಇಬ್ಬರನ್ನು ಬಲಿ ತೆಗೆದುಕೊಂಡಿರುವುದು ಮತ್ತು ಆರು ಜನರ ಮೇಲೆ ಗುಂಡು ಹಾರಿಸಿರುವುದು ನಾಗರಿಕ ಸಮಾಜ ಆತಂಕ ಪಡುವಂತಾಗಿದೆ ಎಂದು ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುರ್ರಝಾಕ್ ಕೆಮ್ಮಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇವಲ 200ರಷ್ಟಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಮಂಗಳೂರು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ವಿನಾ ಕಾರಣ ಪ್ರತಿಭಟನಾಕಾರರ ಮೇಲೆ ಲಾಠಿ ಬೀಸಿ ಪ್ರಚೋದಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಪೊಲೀಸರು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದೆ ಕರ್ತವ್ಯಲೋಪ ಎಸಗಲು ಮಂಗಳೂರು ಕಮಿಷನರ್ ನೇರ ಕಾರಣವಾಗಿದ್ದು, ಅವರನ್ನು ತಕ್ಷಣ ವಜಾಗೊಳಿಸುವಂತೆ ಪಿಎಫ್‌ಐ ಆಗ್ರಹಿಸಿದೆ.

ಪ್ರಜಾತಂತ್ರ ವ್ಯವಸ್ಥೆಯಡಿ ಸರ್ವ ಭಾರತೀಯರಿಗೆ ನೀಡಲಾಗಿರುವ ಪ್ರತಿಭಟನೆಯ ಸಾಂವಿಧಾನಿಕ ಹಕ್ಕನ್ನು ಸೆ.144ರ ದುರ್ಬಳಕೆಯ ಮೂಲಕ ಕಸಿಯಲಾಗುತ್ತಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಇದ್ದರೂ ಪ್ರತಿಭಟನೆ ನಡೆಸಲು ಅವಕಾಶ ನೀಡಿರುವುದು ಮತ್ತು ಪ್ರತಿಭಟನಾಕಾರರನ್ನು ನಿಯಂತ್ರಿಸಿರುವುದು ಕಂಡುಬಂದಿದೆ. ಆದರೆ ಮಂಗಳೂರಿನಲ್ಲಿ ಪೊಲೀಸರು ಪ್ರತಿಭಟನಕಾರರೊಂದಿಗೆ ಯಾವುದೇ ಮಾತುಕತೆ ನಡೆಸದೆ ಏಕಾಏಕಿ ಲಾಠಿಪ್ರಹಾರ, ಗುಂಡು ಹಾರಾಟ, ಮಸೀದಿಗೆ ಕಲ್ಲುತೂರಾಟ ನಡೆಸಿರುವುದು ಗೂಂಡಾಗಿರಿಯಾಗಿದೆ. ಪೊಲೀಸರು ಜನರ ಮೇಲೆ ನೇರವಾಗಿ ಗುಂಡು ಹಾರಿಸಿ ಇಬ್ಬರನ್ನು ಬಲಿ ತೆಗೆದುಕೊಂಡಿರುವುದು ಮಾತ್ರವಲ್ಲದೆ ಪ್ರತಿಭಟನಾ ನಿರತರೊಂದಿಗೆ ಶಾಂತಿಗಾಗಿ ಕರೆ ಕೊಡುವಂತೆ ಕಮಿಷನರ್ ಕರೆಸಿ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ. ಅಶ್ರಫ್ ಮೇಲೆಯೂ ಗುಂಡು ಹಾರಿಸುವ ಮೂಲಕ ಪೊಲೀಸರ ಫ್ಯಾಸಿಸ್ಟ್ ಮನೋಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News