ಮಂಗಳೂರು ಗೋಲಿಬಾರ್ ಪೊಲೀಸರ ಪೂರ್ವಯೋಜಿತ ಕೃತ್ಯ: ಪಿಎಫ್‌ಐ ಆರೋಪ

Update: 2019-12-22 12:51 GMT

ಮಂಗಳೂರು, ಡಿ.22: ಪೌರತ್ವ ತಿದ್ದುಪಡಿಯ ವಿರುದ್ಧ ಮಂಗಳೂರಿನಲ್ಲಿ ನಾಗರಿಕರು ಸ್ವಯಂಪ್ರೇರಿತರಾಗಿ ನಡೆಸಿದ ಪ್ರತಿಭಟನೆಯನ್ನು ದಮನಿಸುವ ನೆಪದಲ್ಲಿ ಪೊಲೀಸರು ಗೋಲಿಬಾರ್ ಮೂಲಕ ಇಬ್ಬರು ಮುಸ್ಲಿಮ್ ಯುವಕರನ್ನು ಹತ್ಯೆಗೈದಿರುವುದು ಪೂರ್ವಯೋಜಿತ ಕೃತ್ಯವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ನಗರದಲ್ಲಿ ದುಡಿಯುತ್ತಿದ್ದ ಜಲೀಲ್ ಮತ್ತು ನೌಶೀನ್ ಎಂಬವರನ್ನು ಪೊಲೀಸರು ಹತ್ಯೆಗೈಯ್ಯುವ ಉದ್ದೇಶದಿಂದಲೇ ಎದೆ ಮತ್ತು ತಲೆಯ ಭಾಗಕ್ಕೆ ಗುಂಡುಹಾರಿಸಿದ್ದು ಇದರ ವೀಡಿಯೋ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಇಷ್ಟೆಲ್ಲ ಗುಂಡು ಹಾರಿಸಿ ಒಬ್ಬರೂ ಸಾಯಲಿಲ್ಲವಲ್ಲಾ ಎಂದು ಗುಂಡುಹಾರಿಸಲು ಪ್ರೇರೇಪಿಸುತ್ತಿರುವ ಪೊಲೀಸ್ ಅಧಿಕಾರಿಯ ವೀಡಿಯೋ ದೃಶ್ಯಗಳು ಕೂಡ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಇಬ್ಬರು ಮುಸ್ಲಿಮ್ ಯುವಕರ ಹತ್ಯೆಗೆ ಮಂಗಳೂರು ಕಮಿಷನರ್ ಡಾ. ಹರ್ಷ ಹಾಗೂ ಅವರ ತಂಡದ ಇತರ ಅಧಿಕಾರಿಗಳು ನೇರ ಕಾರಣವಾಗಿದ್ದು, ಆರೋಪಿತ ತಪ್ಪಿತಸ್ಥರನ್ನು ಸೇವೆಯಿಂದ ಅಮಾನತುಗೊಳಿಸಿ ಐಪಿಸಿ ಸೆ.ಕಲಂ 302ರ ಪ್ರಕಾರ ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಪೊಲೀಸರು ನಡೆಸಿರುವ ಮೃಗೀಯ ವರ್ತನೆಯು ನಾಗರಿಕರನ್ನು ಆತಂಕ್ಕೀಡು ಮಾಡಿದೆ. ಪೊಲೀಸರು ನಗರದ ಪ್ರಮುಖ ಆಸ್ಪತ್ರೆಗೆ ನುಗ್ಗಿ ದಾಂಧಲೆ ನಡೆಸಿದ್ದು ಮಾತ್ರವಲ್ಲದೆ ತೀವ್ರ ನಿಗಾ ಘಟಕಕ್ಕೂ ನುಗ್ಗಿ ದಾಂಧಲೆ ನಡೆಸಿರುವುದು ಪೊಲೀಸರ ರಾಕ್ಷಸೀಯ ವರ್ತನೆಗೆ ಸಾಕ್ಷಿಯಾಗಿವೆ. ಪೊಲೀಸರ ಈ ರೀತಿಯ ಬೆದರಿಕೆಯ ಕ್ರಮಗಳು ಜನರ ಪ್ರತಿಭಟನೆಯ ಕಿಚ್ಚನ್ನು ತಣಿಸದು ಹಾಗು ಗೋಲಿಬಾರ್ ಹತ್ಯೆಯೊಂದಿಗೆ ಈ ಹೋರಾಟವು ಕೊನೆಗೊಳ್ಳದು. ಮೂಲಭೂತ ಹಕ್ಕಿಗಾಗಿ ನಾಗರಿಕರು ಬೀದಿಗಿಳಿದು ಹೋರಾಟಕ್ಕಿಳಿದಿದ್ದು ಇದು ಜನಾಂದೋಲನವಾಗಿ ನ್ಯಾಯ ಪಡೆಯುವವರೆಗೂ ಮುಂದುವರಿಯಲಿದೆ. ಪೊಲೀಸರು ಬಲಿಪಡೆದ ಎರಡು ಜೀವಗಳಿಗೆ ನ್ಯಾಯ ಸಿಗುವವರೆಗೆ ಮತ್ತು ಆರೋಪಿತ ಪೊಲೀಸರಿಗೆ ಶಿಕ್ಷೆ ಆಗುವವರೆಗೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪಿಎಫ್‌ಐ ಎಚ್ಚರಿಸಿದೆ.

ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವುದಕ್ಕಾಗಿ ಸೆಕ್ಷನ್ 144ನ್ನು ದುರ್ಬಳಕೆ ಮಾಡಲಾಗಿದೆ. ಅದಲ್ಲದೆ ಇಂಟರ್ನೆಟ್ ವ್ಯವಸ್ಥೆಯನ್ನು ಸ್ತಬ್ಧಗೊಳಿಸುತ್ತಿರುವುದು ಸರ್ವಾಧಿಕಾರದ ಪರಮಾವಧಿಯಾಗಿದೆ. ಇದು ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಪಡಿಸುವಿಕೆ ಮತ್ತು ಸಭೆ ಸೇರುವ ಹಾಗೂ ಸಂಘಟಿಸುವ ಸ್ವಾತಂತ್ರ್ಯದ ಹಕ್ಕನ್ನು ನಿಗ್ರಹಿಸುವ ಷಡ್ಯಂತ್ರವಾಗಿದೆ ಎಂದು ಶಾಕಿಬ್ ಖಂಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದ ಫ್ಯಾಶಿಸ್ಟ್ ಸರಕಾರದ ಮೂಲಕ ತರಲಾದ ಸಿಎಎ ಮತ್ತು ಎನ್‌ಆರ್‌ಸಿಯ ವಿರುದ್ಧ ಹೆಚ್ಚುತ್ತಿರುವ ಆಂದೋಲನಗಳ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ಪ್ರಯತ್ನಗಳೆಲ್ಲವೂ ಸರ್ವಾಧಿಕಾರ ಆಡಳಿತದ ಲಕ್ಷಣಗಳಾಗಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯು ಗಂಭೀರ ಅಪಾಯವನ್ನು ಎದುರಿಸುತ್ತಿರುವುದರ ಸೂಚನೆಯಾಗಿದೆ. ಫ್ಯಾಶಿಸ್ಟ್ ಸರಕಾರವಿರುವ ರಾಜ್ಯಗಳಲ್ಲಿ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡುವ ಬದಲು ಪ್ರಭುತ್ವದ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯಾಚರಿಸುತ್ತಿದ್ದಾರೆ. ಸಾಂವಿಧಾನಿಕ ಮೌಲ್ಯಗಳನ್ನು ರಕ್ಷಿಸುವುದು ಪೊಲೀಸರ ಕರ್ತವ್ಯವೇ ಹೊರತು ಜನರನ್ನು ಬೆದರಿಸುವುದಲ್ಲ ಎಂದು ಮುಹಮ್ಮದ್ ಶಾಕಿಬ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News