ಗೋಲಿಬಾರ್ ಪ್ರಕರಣ: ಪೊಲೀಸರಿಂದ ತಿರುಚಲು ಯತ್ನ; ಎಸ್‌ಡಿಪಿಐ ಆರೋಪ

Update: 2019-12-22 12:51 GMT

ಮಂಗಳೂರು, ಡಿ.22: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಗುರುವಾರ ಜನರು ಸ್ವಯಂ ಪ್ರೇರಿತರಾಗಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ನಡೆದ ಗೋಲಿಬಾರ್ ಪ್ರಕರಣವನ್ನು ಪೊಲೀಸರು ತಿರುಚಲು ಯತ್ನಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆರೋಪಿಸಿದೆ.

ಪೊಲೀಸರೇ ಲಾಠಿ ಚಾರ್ಜ್ ನಡೆಸಿ, ಅಶಾಂತಿ ಸೃಷ್ಟಿಸಿದ್ದಾರೆ. ಗೋಲಿಬಾರ್ ನಡೆಸಿ ಎರಡು ಅಮಾಯಕ ಜೀವಗಳನ್ನು ಬಲಿ ಪಡೆದುಕೊಂಡಿದ್ದಾರೆ. ಹಲವು ಮಂದಿಯನ್ನು ಗಾಯಳುಗಳನ್ನಾಗಿ ಮಾಡಿದ್ದಾರೆ. ಆ ಬಳಿಕ ಪೊಲೀಸ್ ಆಯುಕ್ತರು ಸುದ್ದಿಗೋಷ್ಠಿ ನಡೆಸಿ ಏಳು ಸಾವಿರದಷ್ಟು ಮಂದಿ ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ ಮತ್ತು ಬಂದರು ಠಾಣೆಯನ್ನು ಧ್ವಂಸಗೆಯ್ಯಲು ಪ್ರಯತ್ನ ನಡೆಸಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ನೀಡಿದ್ದರು. ಆದರೆ ಅದಕ್ಕೆ ಪೂರಕವಾದ ಯಾವುದೇ ಸಿಸಿ ಟಿವಿ ಫೋಟೇಜ್‌ನ ದಾಖಲೆಗಳನ್ನು ಇಲ್ಲಿಯವರೆಗೂ ಬಹಿರಂಗಪಡಿಸಿಲ್ಲ. ಅಲ್ಲದೆ ಎಫ್‌ಐ ಆರ್‌ನಲ್ಲಿ ಪ್ರತಿಭಟನಾಕಾರರ ಸಂಖ್ಯೆ 1500-2000 ಎಂದು ನಮೂದಿಸಿ ಬಲಿಯಾದ ಇಬ್ಬರು ಅಮಾಯಕರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲು ಮಾಡಿರುತ್ತಾರೆ. ಹಾಗೆಯೇ ವಸ್ತು ನಿಷ್ಠ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದ ಕೇರಳದ ಮಾಧ್ಯಮದ ವರದಿಗಾರರನ್ನು ಲೈವ್ ಟೆಲಿಕಾಸ್ಟ್ ಮಾಡುತ್ತಿರುವಾಗಲೇ ಬಂಧಿಸಿರುವುದು ಹಲವಾರು ಗೊಂದಲಗಳಿಗೆ ಮತ್ತು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಒಟ್ಟಾರೆ ಪ್ರಕರಣವನ್ನು ಗಮನಿಸುವಾಗ ಪೊಲೀಸರು ತಮ್ಮ ಮೇಲಿನ ಆರೋಪವನ್ನು ಮರೆಮಾಚಲು ಮಾಡಿದಂತಹ ದೊಡ್ಡ ನಾಟಕವೆಂದು ಸ್ಪಷ್ಟವಾಗುತ್ತಿದೆ ಎಂದು ಎಸ್‌ಡಿಪಿಐ ಹೇಳಿಕೆಯಲ್ಲಿ ತಿಳಿಸಿದೆ.

ಘಟನೆಯ ಎಲ್ಲಾ ವೀಡಿಯೊ ದಾಖಲೆಗಳಲ್ಲಿ ಪೊಲೀಸರು ಕಾನೂನು ಉಲ್ಲಂಘಿಸಿದ್ದು ಮತ್ತು ಪೂರ್ವಯೋಜಿತವಾಗಿ ಮಾಡಿದಂತಹ ಕೃತ್ಯ ಎಂದು ಸ್ಪಷ್ಟವಾಗಿ ಗೋಚರವಾಗುವಾಗುತ್ತಿದೆ. ಯಾವುದೇ ಕಾರಣಕ್ಕೂ ತಮ್ಮ ಮೇಲಿನ ಆರೋಪವನ್ನು ಮರೆಮಾಚಲು ಸಾದ್ಯವಿಲ್ಲ. ಆದುದರಿಂದ ಸರಕಾರ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ತಪ್ಪಿತಸ್ಥ ಕಮಿಷನರ್ ಮತ್ತು ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News