ಪೇಜಾವರಶ್ರೀಗಳ ಆರೋಗ್ಯ ಯಥಾಸ್ಥಿತಿಯಲ್ಲಿ ಮುಂದುವರಿಕೆ

Update: 2019-12-22 16:17 GMT

ಉಡುಪಿ, ಡಿ.22: ನ್ಯುಮೋನಿಯ ಹಾಗೂ ಉಸಿರಾಟದ ತೊಂದರೆಗಾಗಿ ಶುಕ್ರವಾರ ಮುಂಜಾನೆ ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗಕ್ಕೆ ದಾಖಲಾಗಿರುವ ಪೇಜಾವರ ಮಠದ 89 ವರ್ಷದ ಹಿರಿಯ ಯತಿಗಳಾದ ಶ್ರೀವಿಶ್ವೇಶತೀರ್ಥರ ಆರೋಗ್ಯ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಆರೋಗ್ಯ ಸ್ಥಿರವಾಗಿದ್ದರೂ, ಇನ್ನೂ ಗಂಭೀರವಾಗಿಯೇ ಇದೆ ಎಂದು ಕೆಎಂಸಿ ಆಸ್ಪತ್ರೆ ರವಿವಾರ ಸಂಜೆ ಬಿಡುಗಡೆ ಗೊಳಿಸಿದ ಬುಲೆಟಿನ್‌ನಲ್ಲಿ ತಿಳಿಸಿದೆ.

ನಿನ್ನೆಗೆ ಹೋಲಿಸಿದರೆ ಅವರ ದೈಹಿಕ ಆರೋಗ್ಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ತೀವ್ರವಾದ ಉಸಿರಾಟದ ತೊಂದರೆಗಾಗಿ ಡಿ.20ರ ಮುಂಜಾನೆ ಆಸ್ಪತ್ರೆಗೆ ದಾಖಲಾದ ಪೇಜಾವರಶ್ರೀಗಳಿಗೆ ಈಗಲೂ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಈಗಲೂ ಕೃತಕ ಉಸಿರಾಟದ ಬೆಂಬಲ (ವೆಂಟಿಲೇಟರ್)ದಲ್ಲೇ ಇದ್ದಾರೆ ಎಂದು ಬುಲೆಟಿನ್‌ನಲ್ಲಿ ತಿಳಿಸಲಾಗಿದೆ.

"ಸ್ವಾಮೀಜಿಗಳ ಎದೆಯಲ್ಲಿ ಕಟ್ಟಿದ್ದ ಕಫ ನಿಧಾನವಾಗಿ ಕರಗುತ್ತಿದೆ. ಚಿಕಿತ್ಸೆಗೆ ಅವರು ತೀರಾ ನಿಧಾನವಾಗಿ ಸ್ಪಂಧಿಸುತಿದ್ದಾರೆ. ವಯಸ್ಸಿನ ಕಾರಣಕ್ಕಾಗಿ ಅವರಿಗೆ ತೀವ್ರ ನಿಗಾವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ.ಸುಧಾ ವಿದ್ಯಾಸಾಗರ್ ನೇತೃತ್ವದ ವೈದ್ಯರ ತಂಡ ತಿಳಿಸಿದೆ" ಎಂದು ಸ್ವಾಮೀಜಿಗಳ ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ ತಿಳಿಸಿದ್ದಾರೆ. ಭಕ್ತರು ಆತಂಕ ಪಡಬೇಕಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.

ಅಷ್ಟ ಮಠಗಳ ಪೈಕಿ ಕೃಷ್ಣಾಪುರ ಹಾಗು ಪಲಿಮಾರು ಕಿರಿಯ ಯತಿಗಳು ಇಂದು ಆಸ್ಪತ್ರೆಗೆ ಭೇಟಿ ನೀಡಿ ಸ್ವಾಮೀಜಿಗಳ ಆರೋಗ್ಯವನ್ನು ವಿಚಾರಿಸಿದ್ದಾರೆ. ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥರು ಕಳೆದ ಮೂರು ದಿನಗಳಿಂದ ಹೆಚ್ಚಿನ ಸಮಯವನ್ನು ಆಸ್ಪತ್ರೆಯಲ್ಲೇ ಕಳೆಯುತಿದ್ದಾರೆ. ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡೀಸ್ ಹಾಗೂ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿ ಅವರು ಶನಿವಾರ ರಾತ್ರಿ ಪೇಜಾವರಶ್ರೀಗಳನ್ನು ಭೇಟಿ ಮಾಡಿದರು.

ಸ್ಪೀಕರ್ ಕಾಗೇರಿ ಭೇಟಿ: ಅನಾರೋಗ್ಯಕ್ಕಾಗಿ ಆಸ್ಪತ್ರೆಗೆ ದಾಖಲಾಗಿರುವ ಪೇಜಾವರಶ್ರೀಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಲು ವಿಧಾನಸಭೆಯ ಸಭಾಪತಿ ವಿಶ್ವೇಶರ ಹೆಗಡೆ ಕಾಗೇರಿ ಇಂದು ಮಣಿಪಾಲ ಕೆಎಂಸಿಗೆ ಆಗಮಿಸಿದರು.
ಶ್ರೀಗಳನ್ನು ಭೇಟಿಯಾದ ಬಳಿಕ ನಿರ್ಗಮಿಸುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕಾಗೇರಿ, ಶ್ರೀಗಳ ಆರೋಗ್ಯಕ್ಕಾಗಿ ಕೋಟಿ ಕೋಟಿ ಜನರು ಪ್ರಾರ್ಥಿಸುತ್ತಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತದೆ ಎಂಬ ವಿಶ್ವಾಸವಿದೆ. ರಾಷ್ಟ್ರ ಕಾರ್ಯದಲ್ಲಿ ಪೇಜಾವರಶ್ರೀಗಳದ್ದು ದೊಡ್ಡ ಕೊಡುಗೆಯಿದೆ. ಚಿಕಿತ್ಸೆಗೆ ಶ್ರೀಗಳು ಸ್ಪಂಧಿಸುತಿದ್ದಾರೆ. ಆದರೆ ನಿಧಾನಗತಿಯಲ್ಲ್ಲಿ ಸ್ಪಂದಿಸುತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದರು.

ಬನ್ನಂಜೆ ಗೋವಿಂದಾಚಾರ್ಯ: ಶ್ರೀಗಳನ್ನು ಭೇಟಿಯಾದ ಅವರ ಹಿರಿಯ ಸಂಸ್ಕೃತ ವಿದ್ವಾಂಸ ಹಾಗೂ ಸ್ವಾಮಿಗಳ ನಿಕಟವರ್ತಿ ಬನ್ನಂಜೆ ಗೋವಿಂದಾಚಾರ್ಯರು ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾವು ದೇವರಲ್ಲಿ ಬೇಡೋಣ. ಅವರ ಆರೋಗ್ಯ ಸ್ಥಿರವಾಗಿದೆ, ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.

ಶ್ರೀಗಳ ಶ್ವಾಸಕೋಶದಲ್ಲಿರುವ ಕಫ ಕರಗಿದರೆ ಆತಂಕ ಪಡುವ ಅಗತ್ಯವೆ ಇಲ್ಲಾ. ಈ ಹಿಂದೆ ಅವರು ಆರೋಗ್ಯದ ಬಗ್ಗೆ ಅಲಕ್ಷ್ಯ ಮಾಡಿದ್ದರು, ಮೊದಲೇ ವೈದ್ಯರ ಬಳಿ ತೆರಳಿದ್ದರೆ ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲೂ ಪ್ರಯಾಣ ಮಾಡಿ ಭಾಷಣ ಮಾಡುತಿದ್ದರು. ಶೀತ ಎನ್ನುವ ಕಾರಣಕ್ಕೆ ಆರೋಗ್ಯವನ್ನು ಅಲಕ್ಷ್ಯ ಮಾಡಿದರು ಎಂದ ಬನ್ನಂಜೆ, ಶ್ರೀಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ನಾವು ಪ್ರಾರ್ಥಿಸೋಣ. ಅವರ ಇಚ್ಛಾ ಶಕ್ತಿ ಉತ್ತಮವಾಗಿದೆ. ಅದರಿಂದಲೇ ಶೀಘ್ರದಲ್ಲಿ ಗುಣಮುಖರಾಗಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ಹೇಳಿದರು.

ನೀರಾ ರಾಡಿಯಾ: ಪೇಜಾವರಶ್ರೀಗಳ ಆರೋಗ್ಯ ಸ್ಥಿರವಾಗಿದೆ. ಸಂಪೂರ್ಣ ಸುಧಾರಿಸಲು ಸಮಯಾವಕಾಶಬೇಕು. ನ್ಯುಮೋನಿಯಾಗೆ ಕೆಲದಿನಗಳ ಚಿಕಿತ್ಸೆ ಬೇಕಾಗುತ್ತದೆ. ಆಸ್ಪತ್ರೆಗೆ ದಾಖಲಾದ ಸ್ಥಿತಿಗಿಂತ ಈಗ ಬಹಳ ಸುಧಾರಿಸಿದೆ. ಉತ್ಪಲ್ ಶರ್ಮಾ, ಅಜಯ್ ಅಗರವಾಲ್ ಎಂಬ ಇಬ್ಬರು ತಜ್ಞರು ನನ್ನ ಜೊತೆಗಿದ್ದಾರೆ ಎಂದು ಪೇಜಾವರ ಶಿಷ್ಯೆ ನೀರಾ ರಾಡಿಯಾ ಹೇಳಿದರು. ಸುದ್ದಿ ತಿಳಿದು ಉಡುಪಿಗೆ ಧಾವಿಸಿ ಬಂದಿರುವ ರಾಡಿಯಾ ಕಳೆದ ಎರಡು ದಿನಗಳಿಂದ ಇಲ್ಲೇ ಉಳಿದುಕೊಂಡಿದ್ದಾರೆ.

‘ನಾವು ಮಥುರಾ ಮತ್ತು ಡೆಲ್ಲಿ ಆಸ್ಪತ್ರೆಯಿಂದ ಬಂದಿದ್ದೇವೆ. ಡಾಕ್ಟರ್ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇವೆ. ಒಬ್ಬ ರೋಗಿಯನ್ನು ಮೂರು ದಿನ ಮಾನಿಟರ್ ಮಾಡಬೇಕು. ಗುರುಗಳ ಆರೋಗ್ಯದಲ್ಲಿ ಸುಧಾರಣೆ ಇದೆ. ಕೆಎಂಸಿ ವೈದ್ಯರ ತಂಡ ಬಹಳ ಶ್ರಮ ವಹಿಸುತ್ತಿದೆ’ ಎಂದು ರಾಡಿಯಾ ಜೊತೆ ಬಂದಿರುವ ತಜ್ಞ ವೈದ್ಯರಲ್ಲೊಬ್ಬರಾದ ಮಥುರಾ ಮೂಲಕ ಡಾ. ಉತ್ಪಲ್ ಶರ್ಮಾ ತಿಳಿಸಿದರು.

ಮಂತ್ರಾಲಯ ಸ್ವಾಮೀಜಿ: ಮಂತ್ರಾಲಯ ಮಠಾಧೀಶರಾದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮೀಜಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಶ್ರೀಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಭುದೇಂದ್ರ ತೀರ್ಥರು, ಮಂತ್ರಾಲಯದಲ್ಲಿ ದೈನಂದಿನ ಪೂಜೆ ಮುಗಿಸಿ ಬಂದಿದ್ದೇವೆ. ಶ್ರೀಗಳನ್ನು ಕಣ್ಣಾರೆ ನೋಡಿ ಈಗ ತೃಪ್ತಿಯಾಯಿತು. ಕ್ರಮ ಕ್ರಮವಾಗಿ ಗುಣಮುಖರಾಗುತಿದ್ದಾರೆ ಎಂದರು.

ಮಂತ್ರಾಲಯ ಮಠದ ವತಿಯಿಂದ ಹೋಮ, ಜಪ, ಧಾರ್ಮಿಕ ವಿಧಿ ಗಳನ್ನು ಏರ್ಪಡಿಸಿದ್ದೇವೆ. ಶಾಖಾಮಠ, ಭಕ್ತರು, ವಿದ್ವಾಂಸರಿಗೆ ಕರೆ ಕೊಟ್ಟಿದ್ದೇವೆ. ವೈದ್ಯ ತಂಡ ತುಂಬಾ ಶ್ರಮ ವಹಿಸುತ್ತಿದೆ. ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಕಿರಿಯ ಸ್ವಾಮೀಜಿಗಳಿಗೂ ದೈರ್ಯ ನೀಡಿದ್ದೇವೆ. ದೇವರು ಅವರನ್ನು ಬೇಗ ಗುಣಮುಖವಾಗುವಂತೆ ಮಾಡಲಿ ಎಂದು ಮಂತ್ರಾಲಯಶ್ರೀ ಹಾರೈಸಿದರು.

ಪೇಜಾವರಶ್ರೀಗಳು ರಾಮಮಂದಿರಕ್ಕೆ ಧಾರ್ಮಿಕ,ಲೌಕಿಕ ಹೋರಾಟ ಮಾಡಿದ ಹಿರಿಯ ವ್ಯಕ್ತಿ. ನ್ಯಾಯಾಲಯದ ತೀರ್ಪು ಹಿನ್ನಲೆಯಲ್ಲಿ ಶೀಘ್ರವೇ ಮಂದಿರ ನಿರ್ಮಾಣವಾಗಲಿ. ಪೇಜಾವರಶ್ರೀಗಳೇ ರಾಮಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಿ ಎಂದು ಶ್ರೀಸುಭುದೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.

ಸಂಜೆ ಚಿತ್ರದುರ್ಗದ ಶ್ರೀಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಪೇಜಾವರಶ್ರೀಗಳನ್ನು ಕೆಎಂಸಿಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ನಾಡಿನ ಅನೇಕ ಮಠ, ಮಂದಿರಗಳಲ್ಲಿ ಪೇಜಾವರಶ್ರೀಗಳ ಆರೋಗ್ಯಕ್ಕೆ ಪ್ರಾರ್ಥಿಸಿ ಜಪ, ತಪ, ಹೋಮ ಹವನಗಳು ನೆರವೇರಿದ ಬಗ್ಗೆ ವರದಿಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News