"ನಿಮಗೆ ನಾಚಿಕೆಯಿಲ್ಲ": ವಿಮಾನದಲ್ಲಿ ಪ್ರಜ್ಞಾ ಸಿಂಗ್ ವಿರುದ್ಧ ಪ್ರಯಾಣಿಕನ ಆಕ್ರೋಶ: ವಿಡಿಯೋ ವೈರಲ್

Update: 2019-12-23 09:08 GMT

ಹೊಸದಿಲ್ಲಿ: ದಿಲ್ಲಿಯಿಂದ ಭೋಪಾಲ್ ಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪಯಣಿಸುತ್ತಿದ್ದ ಭೋಪಾಲ್ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ತನಗೆ ನೀಡಲಾದ ಸೀಟಿನ ಕುರಿತು ತಕರಾರೆತ್ತಿದ ನಂತರ ಆಕೆ ಹಾಗೂ ವಿಮಾನದ ಇತರ ಪ್ರಯಾಣಿಕರ ನಡುವೆ ನಡೆದ ವಾಕ್ಸಮರದ ವೀಡಿಯೋ ವೈರಲ್ ಆಗಿದೆ.

ವಿಮಾನದ  ಪ್ರಯಾಣಿಕರು ಪ್ರಜ್ಞಾ ವಿರುದ್ಧ ಆಕ್ರೋಶಗೊಂಡಿರುವುದು ಹಾಗೂ ಜನಪ್ರತಿನಿಧಿಯಾಗಿರುವ ಆಕೆಯ ಕೆಲಸ ಜನರಿಗೆ ತೊಂದರೆಯುಂಟು ಮಾಡುವುದಲ್ಲ ಎಂದು ಆಕೆಗೆ ನೆನಪಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ವಾದ ವಿವಾದ ಹೆಚ್ಚಾದಂತೆ ಸಂಸದೆ ವಿಮಾನ ಸಿಬ್ಬಂದಿಗೆ "ನಿಮ್ಮ ನಿಯಮ ಪುಸ್ತಕ ತೋರಿಸಿ ನನಗೆ ಸರಿಯಾಗದೇ ಇದ್ದರೆ ನಾನು ಹೋಗುತ್ತೇನೆ'' ಎನ್ನುವುದು ಕೇಳಿಸುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಯಾಣಿಕರೊಬ್ಬರು "ನೀವು ಜನಪ್ರತಿನಿಧಿ, ನಿಮ್ಮ ಕೆಲಸ ನಮಗೆ ತೊಂದರೆಯುಂಟು ಮಾಡುವುದಲ್ಲ. ನೀವು ಮುಂದಿನ ವಿಮಾನದಲ್ಲಿ ಬನ್ನಿ'' ಎನ್ನುತ್ತಾರೆ.

``ಫಸ್ಟ್ ಕ್ಲಾಸ್ ಹಾಗೂ ಯಾವುದೇ ಸೌಲಭ್ಯಗಳಿಲ್ಲದೇ ಇರುವಾಗ ಏಕೆ ಹೋಗಬೇಕು'' ಎಂದು ಸಂಸದೆ ಕೇಳಿದಾಗ ``ಫಸ್ಟ್ ಕ್ಲಾಸ್ ನಿಮ್ಮ ಹಕ್ಕಲ್ಲ'' ಎಂದು ಸಹ ಪ್ರಯಾಣಿಕರೊಬ್ಬರು ಹೇಳುತ್ತಾರೆ.

``ನೀವೊಬ್ಬರು ನಾಯಕಿಯಾಗಿರುವುದರಿಂದ ನಿಮ್ಮಿಂದ ಒಬ್ಬರಾದರೂ ತೊಂದರೆಗೋಡಾದರೆ ನೀವು ಅದನ್ನು ಒಪ್ಪಿಕೊಳ್ಳಬೇಕು. ನೀವು 50 ಮಂದಿ ಇತರರಿಗೆ ತೊಂದರೆಯುಂಟು ಮಾಡುತ್ತಿದ್ದರೂ ನಿಮಗೆ ನಾಚಿಕೆಯಿಲ್ಲ" ಎಂದು ಪ್ರಯಾಣಿಕ ಆಕೆಗೆ ಹೇಳುತ್ತಾರೆ.

ಪ್ರಯಾಣಿಕ ಬಳಸಿದ ಭಾಷೆಗೆ ಪ್ರಜ್ಞಾ ಠಾಕುರ್ ಆಕ್ಷೇಪಿಸುತ್ತಿದ್ದಂತೆಯೇ ಪ್ರಯಾಣಿಕ ``ನಾನು ಸರಿಯಾದ ಭಾಷೆಯನ್ನೇ ಬಳಸಿದ್ದೇನೆ'' ಎಂದು ಹೇಳುತ್ತಾರೆ.

ತಾನು ಆಯ್ದುಕೊಂಡಿದ್ದ ಸೀಟ್ ತನಗೆ ನೀಡಲಾಗಿಲ್ಲ ಹಾಗೂ ವಿಮಾನ ಸಿಬ್ಬಂದಿಯ ವರ್ತನೆ ಸರಿಯಿಲ್ಲ ಎಂದು ಪ್ರಜ್ಞಾ ಠಾಕುರ್ ಈಗಾಗಲೇ ಭೋಪಾಲ್ ವಿಮಾನ ನಿಲ್ದಾಣದ ನಿರ್ದೇಶಕರಿಗೆ ದೂರಿದ್ದಾರೆ.

ಸಂಸದೆಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸ್ಪೈಸ್ ಜೆಟ್,  ಸುರಕ್ಷತಾ ಕಾರಣಗಳಿಂದಾಗಿ ವೀಲ್ ಚೇರಿನಲ್ಲಿ ಬರುವ ಪ್ರಯಾಣಿಕರಿಗೆ ಎಮರ್ಜೆನ್ಸಿ ಸಾಲಿನ ಸೀಟು ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

"ವಿಮಾನದಲ್ಲಿ ಸಂಸದೆ ಪ್ರಜ್ಞಾ ಠಾಕೂರ್ ಪ್ರಯಣಿಸಿರುವುದಕ್ಕೆ ಸಂತಸವಿದೆ. ಆಕೆ ಸೀಟು ಕಾದಿರಿಸಿ ವಿಮಾನ ನಿಲ್ದಾಣಕ್ಕೆ ಗಾಲಿ ಕುರ್ಚಿಯಲ್ಲಿ ಬಂದಿದ್ದರು. ದಿಲ್ಲಿ-ಭೋಪಾಲ್ ವಿಮಾನ ಬೊಂಬಾರ್ಡಿಯರ್ ಕ್ಯೂ400 ವಿಮಾನವಾಗಿದ್ದು 78 ಸೀಟುಗಳ ಈ ವಿಮಾನದಲ್ಲಿ  ಮೊದಲ ಸಾಲು ಎಮರ್ಜೆನ್ಸಿ ಸಾಲಿನ ಸೀಟುಗಳಾಗಿದ್ದು ಇವುಗಳನ್ನು ಗಾಲಿಕುರ್ಚಿಯ ಪ್ರಯಾಣಿಕರಿಗೆ ನೀಡಲು ಸಾಧ್ಯವಿಲ್ಲ'' ಎಂದು ಸ್ಪೈಸ್ ಜೆಟ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News