ಜಾಮಿಯಾ:8ನೇ ದಿನಕ್ಕೆ ಕಾಲಿರಿಸಿದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆ

Update: 2019-12-23 15:06 GMT

ಹೊಸದಿಲ್ಲಿ,ಡಿ.23: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಸೋಮವಾರ ಎಂಟನೇ ದಿನಕ್ಕೆ ಕಾಲಿರಿಸಿದ್ದು, ನೂರಾರು ವಿದ್ಯಾರ್ಥಿಗಳು ವಿವಿ ಹೊರಭಾಗದ ರಸ್ತೆಗಳಲ್ಲಿ ಸಮಾವೇಶಗೊಂಡು ಘೋಷಣೆಗಳನ್ನು ಕೂಗಿದರು.

ನೂರ್‌ನಗರ, ಬಾಟ್ಲಾ ಹೌಸ್ ಮತ್ತು ಓಖ್ಲಾ ಪ್ರದೇಶಗಳ ಹಲವಾರು ಶಾಲೆಗಳ ವಿದ್ಯಾರ್ಥಿಗಳೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪೌರತ್ವ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ಹಿಂದೆಗೆದುಕೊಳ್ಳುವಂತೆ ಆಗ್ರಹಿಸುತ್ತಿರುವ ಜಾಮಿಯಾ ವಿದ್ಯಾರ್ಥಿಗಳು,2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ನಂತರ ತನ್ನ ಸರಕಾರವೆಂದೂ ಎನ್‌ಆರ್‌ಸಿ ಬಗ್ಗೆ ಚರ್ಚಿಸಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ.

ಎಲ್ಲ ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಅಲ್ಪಸಂಖ್ಯಾತರು ‘ಹೊರಗಿನವರು ’ ಮತ್ತು ‘ಅಕ್ರಮ ವಲಸಿಗರು ’ಎಂದಾದರೆ ಎಷ್ಟು ಬಂಧನ ಕೇಂದ್ರಗಳನ್ನು ಸರಕಾರವು ನಿರ್ಮಿಸಲಿದೆ ಎಂದೂ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.

 ಮೋದಿ ಅವರಿಗೆ ಪೊಲೀಸ್ ಪಡೆಯ ಬಗ್ಗೆ ದಿಢೀರ್ ಪ್ರೀತಿ ಹುಟ್ಟಿದೆ ಎಂದೂ ಅವರು ಆರೋಪಿಸಿದ್ದಾರೆ.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಾಮಿಯಾ ವಿದ್ಯಾರ್ಥಿ ಆಶಿಷ್ ಝಾ ಅವರು,ತಿಂಗಳ ಹಿಂದೆ ನ್ಯಾಯಾಲಯಗಳಲ್ಲಿ ಪೊಲೀಸರು ಥಳಿಸಲ್ಪಟ್ಟಾಗ ಈ ಸರಕಾರವು ಒಂದೇ ಒಂದು ಪ್ರಕರಣವನ್ನು ದಾಖಲಿಸಿರಲಿಲ್ಲ. ಆಗ ಅದಕ್ಕೆ ಪೊಲೀಸರ ಬಗ್ಗೆ ಪ್ರೀತಿಯಿರಲಿಲ್ಲ. ಈಗ ಪೊಲೀಸರು ಜಾಮಿಯಾ,ಅಮು ಮತ್ತು ಇತರ ವಿವಿಗಳಲ್ಲಿ ವಿದ್ಯಾರ್ಥಿಗಳನ್ನು ಥಳಿಸಿರುವಾಗ ಅದು ಪೊಲೀಸರನ್ನು ‘ಶಹೀದ್’ ಎಂದು ಬಣ್ಣಿಸುತ್ತಿದೆ. ಹಾಗಾದರೆ ಉ.ಪ್ರದೇಶದಲ್ಲಿ ಸತ್ತ ವಿದ್ಯಾರ್ಥಿಗಳು ಮತ್ತು ಇತರರು ಯಾರು ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News