ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಎಂಕೆ, ಮಿತ್ರ ಪಕ್ಷಗಳಿಂದ ಪ್ರತಿಭಟನಾ ರ‍್ಯಾಲಿ

Update: 2019-12-23 16:52 GMT

ಚೆನ್ನೈ, ಡಿ. 23: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಎಂಕೆ ಹಾಗೂ ಅದರ ಮಿತ್ರಪಕ್ಷಗಳ ಕಾರ್ಯಕರ್ತರು ಚೆನ್ನೈಯಲ್ಲಿ ಸೋಮವಾರ ಬೃಹತ್ ರ‍್ಯಾಲಿ ನಡೆಸಿದರು. ರ‍್ಯಾಲಿ ನೇತೃತ್ವವನ್ನು ಡಿಎಂಕೆಯ ವರಿಷ್ಠ ಎಂ.ಕೆ. ಸ್ಟಾಲಿನ್ ವಹಿಸಿದ್ದರು. ಅವರೊಂದಿಗೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ, ವಿಸಿಕೆ ನಾಯಕ ತಿರುಮಾಲವನ್ ಹಾಗೂ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ.ಎಸ್. ಅಳಗಿರಿ ಪಾಲ್ಗೊಂಡಿದ್ದರು.

ಪ್ರತಿಭಟನೆ ಸಂದರ್ಭ ‘‘ಧರ್ಮದ ಆಧಾರದಲ್ಲಿ ನಮ್ಮನ್ನು ವಿಭಜಿಸಬೇಡಿ’’, ‘‘ಭಾರತ ನಮ್ಮ ತಾಯ್ನಾಡು’’, ‘‘ವೈವಿಧ್ಯತೆಯಲ್ಲಿ ಏಕತೆ’’ ಮೊದಲಾದ ಘೋಷಣೆಗಳು ಕೇಳಿ ಬಂದವು. ಬಿಗಿ ಭದ್ರತೆ, ಕಣ್ಗಾವಲಿಗೆ ಡ್ರೋನ್‌ಗಳ ನಿಯೋಜನೆ ನಡುವೆ ಡಿಎಂಕೆ ಹಾಗೂ ಇತರ ಮಿತ್ರ ಪಕ್ಷಗಳ ಕಾರ್ಯಕರ್ತರು ಪಕ್ಷದ ಧ್ವಜ, ಬ್ಯಾನರ್ ಹಾಗೂ ಘೋಷಣಾ ಫಲಕಗಳನ್ನು ಹಿಡಿದುಕೊಂಡು ಡೌನ್‌ಟೌನ್ ಎಗ್ಮೋರ್‌ನಿಂದ ರಾಜರಥಿನಂ ಕ್ರೀಡಾಂಗಣದ ವರೆಗೆ ಸುಮಾರು 2.5 ಕಿ.ಮೀ. ರ‍್ಯಾಲಿ ನಡೆಸಿದರು.

ಕ್ರೀಡಾಂಗಣದಲ್ಲಿ ಮಾತನಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಎಲ್ಲ ಕಾರ್ಯಕರ್ತರಿಗೆ ಹಾಗೂ ರ‍್ಯಾಲಿ ಶಾಂತಿಯುತವಾಗಿ ನಡೆಯಲು ನೆರವು ನೀಡಿದ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು. ಅಲ್ಲದೆ, ಶಾಂತಿಯುತವಾಗಿ ಚದುರುವಂತೆ ಆಗ್ರಹಿಸಿದರು. ಪ್ರತಿಭಟನಕಾರರು ಕೇಂದ್ರದ ವಿರುದ್ಧ ‘‘ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂದೆ ತೆಗೆದುಕೊಳ್ಳಿ’’ ‘‘ಕೋಮು ಭಾವನೆಗಳನ್ನು ಉತ್ತೇಜಿಸಬೇಡಿ’’ ಮೊದಲಾದ ಘೋಷಣೆಗಳನ್ನು ಕೂಗಿದರು.

 ಪೌರತ್ವ ತಿದ್ದುಪಡಿ ಕಾಯ್ದೆಗೆ ಬೆಂಬಲ ನೀಡುತ್ತಿರುವ ಆಡಳಿತಾರೂಢ ಎಐಎಡಿಎಂಕೆಯನ್ನು ಪ್ರತಿಭಟನಕಾರರು ತೀವ್ರವಾಗಿ ಟೀಕಿಸಿದರು. ಪ್ರತಿಭಟನೆ ಪಕ್ಷದ ಕಾರ್ಯಕರ್ತರದ್ದಲ್ಲ. ಬದಲಾಗಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಡಲು ನಿರ್ಧರಿಸಿದ ಪಡೆಯದ್ದು. ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಹಾಗೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುವಂತೆ ತಾನು ತಮಿಳು ಜನರಲ್ಲಿ ಮನವಿ ಮಾಡಿದೆ ಎಂದು ಸ್ಟಾಲಿನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News