×
Ad

ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಫಿಲ್ಯಾಂಡರ್ ವಿದಾಯ

Update: 2019-12-23 23:53 IST

ಜೋಹಾನ್ಸ್‌ಬರ್ಗ್, ಡಿ.23: ದಕ್ಷಿಣ ಆಫ್ರಿಕಾದ ಖ್ಯಾತ ವೇಗದ ಬೌಲರ್ ವೆರ್ನಾನ್ ಫಿಲ್ಯಾಂಡರ್ ಇಂಗ್ಲೆಂಡ್ ವಿರುದ್ಧ ಮುಂಬರುವ ಟೆಸ್ಟ್ ಸರಣಿಯ ಬಳಿಕ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೋಮವಾರ ತಿಳಿಸಿದೆ. ಈ ಹಿಂದೆ ಡೇಲ್ ಸ್ಟೇಯ್ನಿ ಹಾಗೂ ಮೊರ್ನೆ ಮೊರ್ಕೆಲ್ ಜೊತೆ ಫಿಲ್ಯಾಂಡರ್ ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್‌ಗೆ ಬಲ ನೀಡಿದ್ದರು. ಸ್ಟೇಯ್ನಿ ಹಾಗೂ ಮೊರ್ಕೆಲ್ ಈಗಾಗಲೇ ಟೆಸ್ಟ್ ನಿಂದ ನಿವೃತ್ತಿಯಾಗಿದ್ದಾರೆ. 34ರ ಹರೆಯದ ಫಿಲ್ಯಾಂಡರ್ ದಕ್ಷಿಣ ಆಫ್ರಿಕಾದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಹೆಚ್ಚಾಗಿ ಆಡುತ್ತಿದ್ದರು. 60 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದ ಅವರು 30 ಏಕದಿನ ಹಾಗೂ 7 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದಾರೆ. ಟೆಸ್ಟ್‌ನಲ್ಲಿ 22.16ರ ಉತ್ತಮ ಸರಾಸರಿಯಲ್ಲಿ 13 ಐದು ವಿಕೆಟ್ ಗೊಂಚಲು ಸಹಿತ ಒಟ್ಟು 216 ವಿಕೆಟ್‌ಗಳನ್ನು ಪಡೆದಿದ್ದಾರೆ. 2020ರ ಜನವರಿಯಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತ್ಯದಲ್ಲಿ ಆಲ್‌ರೌಂಡರ್ ವೆರ್ನಾನ್ ಫಿಲ್ಯಾಂಡರ್ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ.ಈ ಮೂಲಕ ತನ್ನ ಯಶಸ್ವಿ ವೃತ್ತಿಜೀವನಕ್ಕೆ ತೆರೆ ಎಳೆಯಲು ಬಯಸಿದ್ದಾರೆ ಎಂದು ಕ್ರಿಕೆಟ್ ದ.ಆಫ್ರಿಕಾ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News