ನ್ಯೂಝಿಲ್ಯಾಂಡ್ ಪ್ರವಾಸ ಸರಣಿಗೆ ಭಾರತ ‘ಎ’ ತಂಡಕ್ಕೆ ಪಾಂಡ್ಯ

Update: 2019-12-24 18:08 GMT

ಮುಂಬೈ, ಡಿ.24: ನ್ಯೂಝಿಲ್ಯಾಂಡ್ ಪ್ರವಾಸಕ್ಕಾಗಿ ಭಾರ‘ಎ’ ತಂಡದಲ್ಲಿ ಪೃಥ್ವಿ ಶಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಏತನ್ಮಧ್ಯೆ, ಬೆನ್ನಿಗೆ ಆಗಿರುವ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹಾರ್ದಿಕ್ ಪಾಂಡ್ಯ ಅವರನ್ನು ಮೂರು ಏಕದಿನ ಮತ್ತು ಪ್ರವಾಸ ಪಂದ್ಯಗಳಿಗಾಗಿ ಇಂಡಿಯಾ ಎ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

 ಎಂಟು ತಿಂಗಳ ಡೋಪಿಂಗ್ ನಿಷೇಧ ಸಜೆಯ ನಂತರ ಶಾ ಕಳೆದ ತಿಂಗಳು ಕ್ರಿಕೆಟ್‌ಗೆ ವಾಪಸಾಗಿದ್ದರು. ಆ ಬಳಿಕ ಅವರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಮುಂಬೈನ ರಣಜಿ ತಂಡದ ಓಪನರ್ ಆಗಿರುವ ಶಾ ಬರೋಡಾ ವಿರುದ್ಧ ದ್ವಿಶತಕ ದಾಖಲಿಸಿದ್ದರು.

ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ ಮತ್ತು ಮಾಯಾಂಕ್ ಅಗರ್ವಾಲ್ ಭಾರತದ ಆರಂಭಿಕ ಜೋಡಿಯಾಗಿದ್ದರೂ, 20 ವರ್ಷದ ಶಾ ಅವರು ನ್ಯೂಝಿಲ್ಯಾಂಡ್ ಸರಣಿಗೆ ಟೆಸ್ಟ್ ತಂಡಕ್ಕೆ ಮೀಸಲು ಓಪನರ್ ಆಗಿ ಅವಕಾಶ ಪಡೆಯುವುದನ್ನು ನಿರೀಕ್ಷಿಸಲಾಗಿದೆ. ನ್ಯೂಝಿಲ್ಯಾಂಡ್ ಪ್ರವಾಸಕ್ಕಾಗಿ ಇಂಡಿಯಾ ಎ ತಂಡವನ್ನು ಆಯ್ಕೆ ಮಾಡಿದ ನಂತರ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಅವರು ಶಾ ಅವರಿಗೆ ಅಭ್ಯಾಸಕ್ಕೆ ಸಾಧ್ಯವಾದಷ್ಟು ಅವಕಾಶವನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧ ಶಾ ಕಳೆದ ವರ್ಷ ಸ್ಮರಣೀಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

ಹನುಮ ವಿಹಾರಿ ನೂಝಿಲ್ಯಾಂಡ್‌ನಲ್ಲಿ ನಡೆಯಲಿರುವ ಪ್ರಥಮ ದರ್ಜೆ ಪಂದ್ಯಗಳಲ್ಲಿ ಭಾರತ ‘ಎ’ ತಂಡವನ್ನು ಮತ್ತು 50 ಓವರ್‌ಗಳ ‘ಎ’ ತಂಡವನ್ನು ನಾಯಕರಾಗಿ ಶುಭ್‌ಮನ್ ಮುನ್ನಡೆಸಲಿದ್ದಾರೆ.

ಫೆಬ್ರವರಿ 21 ರಂದು ವೆಲ್ಲಿಂಗ್ಟನ್‌ನಲ್ಲಿ ಪ್ರಾರಂಭವಾಗುವ ಮೊದಲ ಟೆಸ್ಟ್ ಸರಣಿಯ ಮುನ್ನ ಟೆಸ್ಟ್ ತಜ್ಞರಾದ ಆರ್. ಅಶ್ವಿನ್, ಅಜಿಂಕ್ಯ ರಹಾನೆ, ಉಮೇಶ್ ಯಾದವ್ ಮತ್ತು ಇಶಾಂತ್ ಶರ್ಮಾ ಅವರು ನ್ಯೂಝಿಲ್ಯಾಂಡ್‌ನಲ್ಲಿ ಅಭ್ಯಾಸ ನಡೆಸಲಿದ್ದಾರೆ. ಎರಡನೇ ಟೆಸ್ಟ್ ಫೆಬ್ರವರಿ 29 ರಿಂದ ನಡೆಯಲಿದೆ.

 ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಮಾಯಾಂಕ್ ಅಗರ್ವಾಲ್ ಭಾರತ ‘ಎ’ ಬ ತಂಡದಲ್ಲಿ ಎರಡನೇ ಪಂದ್ಯವನ್ನು ಆಡಲಿದ್ದಾರೆ ಎಂದು ಪ್ರಸಾದ್ ಹೇಳಿದ್ದಾರೆ

 ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ತವರಿನ ಕ್ರಿಕೆಟ್ ಸರಣಿಗೆ ಭಾರತದ ತಂಡಗಳನ್ನು ಸೋಮವಾರ ಇಲ್ಲಿ ಪ್ರಕಟಿಸಲಾಗಿದೆ.

 ಪಾಂಡ್ಯ ವಾಪಸ್: ಅಕ್ಟೋಬರ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ತಂಡಕ್ಕೆ ವಾಪಸಾಗಿದ್ದಾರೆ. ಡ್ಯಾಶಿಂಗ್ ಆಲ್‌ರೌಂಡರ್ ಅವರು ಸೆಪ್ಟಂಬರ್‌ನಿಂದ ತಂಡದಿಂದ ದೂರವಾಗಿದ್ದಾರೆ. 2018ರಲ್ಲಿ ನಡೆದ ಏಶ್ಯಕಪ್ ನಂತರ ಅವರು ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ಭಾರತ ‘ಎ’ ತಂಡದಲ್ಲಿ ಆಡುವ ಮೂಲಕ ಫಿಟ್‌ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಜನವರಿ ಕೊನೆಯ ವಾರದಲ್ಲಿ 5 ಟ್ವೆಂಟಿ-20 ಅಂತರ್‌ರಾಷ್ಟ್ರೀಯ, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳಿಗೆ ನ್ಯೂಝಿಲ್ಯಾಂಡ್ ಪ್ರವಾಸ ಮಾಡುವ ಹಿರಿಯರ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.

 ‘‘ನ್ಯೂಝಿಲ್ಯಾಂಡ್ ಸರಣಿಯಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವುದನ್ನು ಗುರಿಯಾಗಿಸಿಕೊಂಡಿದ್ದೇನೆ’’ ಎಂದು ಪಾಂಡ್ಯ ಈ ಹಿಂದೆ ಹೇಳಿದ್ದರು.

ಭಾರತ ‘ಎ’ ಮತ್ತು ನ್ಯೂಝಿಲ್ಯಾಂಡ್ ‘ಎ’ ಮೊದಲ ಪ್ರವಾಸ ಪಂದ್ಯ ಜನವರಿ 17 ರಂದು ಮತ್ತು ಮೂರು ಏಕದಿನ ಪಂದ್ಯಗಳನ್ನು ಜನವರಿ 22, 24 ಮತ್ತು 26 ರಂದು ಆಡಲಾಗುವುದು.

► ಭಾರತ ‘ಎ’ ಎರಡು ಪ್ರವಾಸ ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳಿಗೆ ತಂಡ: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ರುತುರಾಜ್ ಗಾಯಕ್‌ವಾಡ್ , ಶುಬ್‌ಮನ್ ಗಿಲ್ (ನಾಯಕ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಅಕ್ಷರ್ ಪಟೇಲ್, ರಾಹುಲ್ ಚಹರ್, ಸಂದೀಪ್ ವಾರಿಯರ್, ಇಶಾನ್ ಪೊರೆಲ್, ಖಲೀಲ್ ಅಹ್ಮದ್, ಮುಹಮ್ಮದ್ ಸಿರಾಜ್, ಇಶಾನ್ ಕಿಶನ್.

►ಭಾರತ ‘ಎ’ ನಾಲ್ಕು ದಿನಗಳ ಆಟಕ್ಕೆ ತಂಡ: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಪ್ರಿಯಾಂಕ್ ಪಾಂಚಲ್, ಅಭಿಮನ್ಯು ಈಶ್ವರನ್, ಶುಬ್‌ಮನ್‌ಗಿಲ್, ಹನುಮ ವಿಹಾರಿ (ನಾಯಕ), ಕೆ.ಎಸ್.ಭರತ್ (ವಿಕೆಟ್ ಕೀಪರ್), ಶಿವಮ್ ದುಬೆ, ಶಹಬಾಝ್ ನದೀಮ್, ರಾಹುಲ್ ಚಹರ್, ಸಂದೀಪ್ ವಾರಿಯರ್ , ಅವೇಶ್ ಖಾನ್, ಮುಹಮ್ಮದ್ ಸಿರಾಜ್, ಇಶಾನ್ ಪೊರೆಲ್, ಇಶಾನ್ ಕಿಶನ್.

►ಭಾರತ ‘ಎ’ 2ನೇ ನಾಲ್ಕು ದಿನಗಳ ಆಟಕ್ಕೆ ತಂಡ: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಶುಬ್‌ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಹನುಮ ವಿಹಾರಿ (ನಾಯಕ), ಕೆ.ಎಸ್.ಭರತ್ (ವಿಕೆಟ್ ಕೀಪರ್), ಶಿವಂ ದುಬೆ, ಆರ್ ,ಅಶ್ವಿನ್, ಶಹಬಾಝ್ ನದೀಮ್, ಸಂದೀಪ್ ವಾರಿಯರ್, ಅವೇಶ್ ಖಾನ್, ಮುಹಮ್ಮದ್ ಸಿರಾಜ್, ಇಶಾನ್ ಪೊರೆಲ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News