ಕೇರಳದ ವಿರುದ್ಧ ರಣಜಿಯಲ್ಲಿ ಫಿಟ್‌ನೆಸ್ ಸಾಬೀತುಪಡಿಸಲು ಬುಮ್ರಾಗೆ ಅವಕಾಶ

Update: 2019-12-24 18:12 GMT

ಮುಂಬೈ, ಡಿ.24: ಗಾಯದ ಕಾರಣದಿಂದಾಗಿ ಕಳೆದ ಸೆಪ್ಟೆಂಬರ್‌ನಿಂದ ಭಾರತದ ಕ್ರಿಕೆಟ್ ತಂಡದಿಂದ ಹೊರಗುಳಿದರುವ ವೇಗಿ ಜಸ್ಪ್ರೀತ್ ಬುಮ್ರಾ ಅವರು ಮುಂದಿನ ತಿಂಗಳು ಶ್ರೀಲಂಕಾ ಟ್ವೆಂಟಿ-20 ಮತ್ತು ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯಗಳ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಆದರೆ ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಬೇಕಾದರೆ ಕೇರಳ ವಿರುದ್ಧ ರಣಜಿ ಪಂದ್ಯದಲ್ಲಿ ತನ್ನ ಫಿಟ್‌ನೆಸ್ ಸಾಬೀತುಪಡಿಸಬೇಕಾಗಿದೆ. ಬುಮ್ರಾ ಗುಜರಾತ್ ತಂಡದ ಪರ ಆಡಲಿದ್ದಾರೆ. ಕೇರಳ ಮತ್ತು ಗುಜರಾತ್ ತಂಡಗಳ ನಡುವೆ ರಣಜಿ ಟ್ರೋಫಿ ಪಂದ್ಯ ಬುಧವಾರ ಆರಂಭವಾಗಲಿದೆ

ಬುಮ್ರಾ ಅವರು ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಕೊನೆಯ ಬಾರಿಗೆ ಭಾರತ ಪರ ಆಡಿದ್ದರು. ಜಮೈಕಾದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅವರು ಹ್ಯಾಟ್ರಿಕ್ ಗಳಿಸಿದ್ದರು. ಅನುಭವಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ವೇಗಿ ಇರ್ಫಾನ್ ಪಠಾಣ್ ಬಳಿಕ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೂರನೇ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದರು. ಕಳೆದ ವಾರ ವಿಶಾಖಪಟ್ಟಣಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದ ಮುನ್ನ ನೆಟ್ ಅಭ್ಯಾಸದ ವೇಳೆ ಚೆನ್ನಾಗಿ ಬೌಲಿಂಗ್ ನಡೆಸಿದ್ದರು. ನಂತರ ಅವರ ಪುನರಾಗಮನವನ್ನು ನಿರೀಕ್ಷಿಸಲಾಗಿತ್ತು.

ಬುಮ್ರಾ 12 ಟೆಸ್ಟ್ ಪಂದ್ಯಗಳಲ್ಲಿ 19.24 ಸರಾಸರಿಯಲ್ಲಿ 62 ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು ಏಕದಿನ ಮತ್ತು ಟ್ವೆಂಟಿ-20 ಪಂದ್ಯಗಳಲ್ಲಿ ಕ್ರಮವಾಗಿ 103 ಮತ್ತು 51 ವಿಕೆಟ್‌ಗಳನ್ನು ಪಡೆದಿದ್ದಾರೆ.

 ಬುಮ್ರಾ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಗುಜರಾತ್ ತಂಡದ ಬೌಲಿಂಗ್ ಇನ್ನಷ್ಟು ಬಲಿಷ್ಠವಾಗಲಿದೆ. ಕಳೆದ ಪಂದ್ಯದಲ್ಲಿ ಹೈದರಾಬಾದ್‌ನ್ನು ಗುಜರಾತ್ ಸುಲಭವಾಗಿ ಮಣಿಸಿತ್ತು. ಇದೀಗ ಎರಡನೇ ಪಂದ್ಯಕ್ಕೆ ಅಣಿಯಾಗಿದೆ. ಮತ್ತೊಂದೆಡೆ ಕೇರಳವು ತವರಿನಲ್ಲಿ ಬಂಗಾಳಕ್ಕೆ ಶರಣಾದ ಬಳಿಕ ಒತ್ತಡಕ್ಕೆ ಒಳಗಾಗಿದೆ. ಮೊದಲ ಪಂದ್ಯದಲ್ಲಿ ಕೇರಳಕ್ಕೆ ದಿಲ್ಲಿ ವಿರುದ್ಧ ಗೆಲ್ಲುವ ಅವಕಾಶ ಇದ್ದರೂ ಡ್ರಾಗೊಳಿಸಲು ಅವಕಾಶ ಮಾಡಿಕೊಟ್ಟು ಇದೀಗ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರ ಉತ್ತಮ ಫಾರ್ಮ್ ನಲ್ಲಿದ್ದಾರೆ. ಭಾರತದ ಟ್ವೆಂಟಿ-20 ತಂಡದ ಸದಸ್ಯರಾಗಿರುವ ಸ್ಯಾಮ್ಸನ್ ಬಂಗಾಳ ವಿರುದ್ಧ ಶತಕ ದಾಖಲಿಸಿದ್ದರು. ಆದರೆ ಬಂಗಾಳ ಈ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News