ಕ್ರಿಕೆಟ್ ಆಸ್ಟ್ರೇಲಿಯಾದ ದಶಕದ ಏಕದಿನ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕ

Update: 2019-12-24 18:21 GMT

ಮೆಲ್ಬೋರ್ನ್, ಡಿ.24: ಹಿರಿಯ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಅವರು ಕ್ರಿಕೆಟ್ ಆಸ್ಟ್ರೇಲಿಯಾದ ದಶಕದ ಏಕದಿನ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ.

 ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದ ಈ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದಾರೆ.

ಎಂಎಸ್ ಧೋನಿ ದಶಕಗಳ ಕಾಲ ಟೀಮ್ ಇಂಡಿಯಾದ ಬ್ಯಾಟಿಂಗ್ ಶಕ್ತಿಯಾಗಿದ್ದರು. ಅವರು ನಾಯಕರಾಗಿದ್ದಾಗ ಭಾರತದ ಏಕದಿನ ತಂಡ ಅತ್ಯುತ್ತಮ ಸಾಧನೆ ಮಾಡಿತ್ತು. ಅವರು ಓರ್ವ ಅತ್ಯುತ್ತಮ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆದಿದ್ದಾರೆ. ಭಾರತ 2011ರಲ್ಲಿ ಧೋನಿ ಪ್ರಯತ್ನದ ಮೂಲಕ ಏಕದಿನ ವಿಶ್ವಕಪ್ ಜಯಿಸಿತ್ತು. ಧೋನಿ 49 ಇನಿಂಗ್ಸ್‌ಗಳಲ್ಲಿ ಅಜೇಯರಾಗಿದ್ದರು. ಈ ದಶಕದಲ್ಲಿ ಅವರು 28 ಬಾರಿ ರನ್ ಚೇಸಿಂಗ್‌ನಲ್ಲಿ ಅಜೇಯರಾಗಿದ್ದರು. ಈ ಸಂದರ್ಭಗಳಲ್ಲಿ ಭಾರತ ಕೇವಲ ಮೂರು ಬಾರಿ ಸೋತಿದೆ.

  38ರ ಹರೆಯದ ಧೋನಿ ಇಲ್ಲಿಯವರೆಗೆ 350 ಏಕದಿನ, 90 ಟೆಸ್ಟ್ ಮತ್ತು 98 ಟ್ವೆಂಟಿ-20ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 829 ಬಲಿ ಪಡೆದಿದ್ದಾರೆ

ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ತಂಡದ ನಾಯಕರಾಗಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 2011ರಲ್ಲಿ ಐಸಿಸಿ 50 ಓವರ್‌ಗಳ ವಿಶ್ವಕಪ್, 2007ರಲ್ಲಿ ಟ್ವೆಂಟಿ-20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ಏಕೈಕ ಅಂತರ್‌ರಾಷ್ಟ್ರೀಯ ನಾಯಕ ಧೋನಿ. ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಐಸಿಸಿ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾವನ್ನು ಒಂದೊಮ್ಮೆ ನಂ.1 ಸ್ಥಾನಕ್ಕೆ ತಲುಪಿಸಿದ್ದರು.

2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ಸೋಲು ಅನುಭವಿಸಿದ ಬಳಿಕ ಧೋನಿ ಭಾರತದ ಪರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಇನ್ನೂ ಅವರು ವೌನ ಮುರಿದಿಲ್ಲ.ಧೋನಿ ಅವರ ಏಕದಿನ ತಂಡದಲ್ಲಿ ಹಾಶೀಂ ಅಮ್ಲ್ಲ, ಎಬಿ ಡಿವಿಲಿಯರ್ಸ್, ಶಾಕೀಬ್ ಅಲ್ ಹಸನ್, ಜೋಸ್ ಬಟ್ಲರ್, ರಶೀದ್ ಖಾನ್, ಮಿಚೆಲ್ ಸ್ಟಾರ್ಕ್, ಟ್ರೆಂಟ್ ಬೌಲ್ಟ್ ಮತ್ತು ಲಸಿತ್ ಮಾಲಿಂಗ ಸ್ಥಾನ ಪಡೆದಿದ್ದಾರೆ. ಏತನ್ಮಧ್ಯೆ, ಕೊಹ್ಲಿಯನ್ನು ದಶಕದ ಕ್ರಿಕೆಟ್ ಆಸ್ಟ್ರೇಲಿಯಾದ ಟೆಸ್ಟ್ ತಂಡದ ನಾಯಕನನ್ನಾಗಿ ನೇಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News