ಪೊಲೀಸ್ ದೌರ್ಜನ್ಯ ಖಂಡಿಸಿ ಡಿ.27ರಂದು ಮಸೀದಿಗಳ ಮುಂದೆ ಭಿತ್ತಿಪತ್ರ ಪ್ರದರ್ಶಿಸಲು ಕರೆ

Update: 2019-12-25 09:07 GMT

ಮಂಗಳೂರು, ಡಿ.25: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಆಕ್ಷೇಪಿಸಿ ಪ್ರತಿಭಟಿಸಲು ಮುಂದಾದವರ ಮೇಲೆ ಮಂಗಳೂರು ಪೊಲೀಸರು ಲಾಠಿಚಾರ್ಜ್, ಗೋಲಿಬಾರ್ ಮೂಲಕ ಇಬ್ಬರನ್ನು ಹತ್ಯೆಗೈದು ದೌರ್ಜನ್ಯ ಎಸಗಿದ್ದನ್ನು ಖಂಡಿಸಿ ಸುನ್ನಿ ಕೋ ಆರ್ಡಿನೇಶನ್ ಕರ್ನಾಟಕ ರಾಜ್ಯ ಘಟಕವು ಡಿ.27ರ ಶುಕ್ರವಾರ ಜುಮಾ ನಮಾಝ್‌ನ ಬಳಿಕ ಎಲ್ಲಾ ಮಸೀದಿಗಳ ಮುಂದೆ ಭಿತ್ತಿಪತ್ರ ಪ್ರದರ್ಶಿಸಲು ಕರೆ ನೀಡಿದೆ.

ಜಿಲ್ಲೆಯಲ್ಲಿ ಅನೇಕ ಪ್ರತಿಭಟನೆಗಳಾಗಿವೆ, ಆದರೆ ಪೊಲೀಸ್ ಇಲಾಖೆಯು ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿರುವುದು ವೀಡಿಯೋ ತುಣುಕುಗಳು ಬಹಿರಂಗಪಡಿಸಿದೆ. ಪೊಲೀಸರ ರಕ್ತದಾಹಕ್ಕೆ ಇಬ್ಬರು ಬಲಿಯಾಗಿದ್ದಲ್ಲದೆ ಇನ್ನೂ ಕೆಲವರು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಅವರ ನೋವು ಅಸಹನೀಯ. ಇಷ್ಟಾಗಿಯೂ ಪೊಲೀಸ್ ಇಲಾಖೆ ರಂಗುರಂಗಾಗಿ ಕಥೆ ಕಟ್ಟುತ್ತಿದೆ. ಮೃತರಾದವನ್ನೂ ಬಿಟ್ಟಿಲ್ಲ, ಎಫ್‌ಐಆರ್‌ನಲ್ಲಿ ಅವರ ಹೆಸರು ಸೇರಿಸಿಕೊಂಡು ಜಾಣರಾಗಲು ಹೊರಟಿದೆ. ದುರಂತವೆಂದರೆ, ಸರಕಾರ ಇದನ್ನೆಲ್ಲಾ ನಂಬುತ್ತಿದೆ. ಪೊಲೀಸ್ ಇಲಾಖೆಯಲ್ಲಿರುವ ಹಂತಕರ ವಿರುದ್ಧ ಧ್ವನಿಯೆತ್ತಬೇಕಾಗಿದೆ. ಈ ಪೊಲೀಸರು ಇಲಾಖೆಗೇ ಅವಮಾನ. ತಪ್ಪಿತಸ್ಥರನ್ನು ಸೇವೆಯಿಂದ ವಜಾಗೊಳಿಸಲೇಬೇಕು ಮತ್ತು ಉನ್ನತ ಮಟ್ಟದ ತನಿಖೆಯಾಗಬೇಕು. ತಪ್ಪಿತಸ್ಥರನ್ನು ಜೈಲಿಗಟ್ಟಬೇಕು ಎಂದು ಸುನ್ನಿ ಕೋ ಆರ್ಡಿನೇಶನ್ ಕರ್ನಾಟಕ ರಾಜ್ಯ ಘಟಕವು ಆಗ್ರಹಿಸಿದೆ.

ಜನರ ಜೀವಿಸುವ ಹಕ್ಕನ್ನು ಬಂದೂಕುಗಳ ಮೂಲಕ ಅಂತ್ಯಬರೆಯುವ ಹಂತಕ ಪೊಲೀಸರ ವಿರುದ್ಧ ಧ್ವನಿಯೆತ್ತುವ ಸಲುವಾಗಿ ಡಿ.27ರಂದು ಶುಕ್ರವಾರ ಜುಮಾ ನಮಾಝ್ ಬಳಿಕ ಎಲ್ಲಾ ಮಸೀದಿಗಳ ಮುಂದೆ ಪೊಲೀಸ್ ದೌರ್ಜನ್ಯದ ವಿರುದ್ಧ ಬಿತ್ತಿಪತ್ರ ಪ್ರದರ್ಶಿಸಲು ಸುನ್ನಿ ಕೋ ಆರ್ಡಿನೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಎಸ್.ಪಿ.ಹಂಝ ಸಖಾಫಿ ಬಂಟ್ವಾಳ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News