ಮಂಗಳೂರು: ಅಶ್ರುವಾಯು ಕೊರತೆ ಎದುರಾಗಿ ಗೋಲಿಬಾರ್ ನಡೆಸಿದ್ದ ಪೊಲೀಸರು?

Update: 2019-12-25 14:37 GMT

ಮಂಗಳೂರು: ನಗರದಲ್ಲಿ ಡಿಸೆಂಬರ್ 19ರಂದು ನಡೆದ ಪೌರತ್ವ ವಿರೊಧಿ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರಿನಲ್ಲಿ ಇಬ್ಬರು ಬಲಿಯಾದ ನಂತರ ಪೊಲೀಸರು ಗೋಲಿಬಾರ್ ನಡೆಸುವ ಅಗತ್ಯವಿತ್ತೇ ಎಂಬ ಕುರಿತು ಪರ ವಿರೋಧ ಚರ್ಚೆಗಳು ಹಾಗೂ ರಾಜಕೀಯ ಕೆಸರೆರಚಾಟ ನಡೆಯುತ್ತಲೇ ಇದೆ.

ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿ, ಅಶ್ರುವಾಯು ಸಿಡಿಸಿದರೆ ಸಾಕಿತ್ತು, ಗೋಲಿಬಾರ್ ಏಕೆ ಮಾಡಬೇಕಿತ್ತು ಎಂಬ ಪ್ರಶ್ನೆಯನ್ನು ಪೊಲೀಸ್ ಇಲಾಖೆ ಎದುರಿಸುತ್ತಿದೆ. ಪ್ರ್ರತಿಭಟನೆ ಹಾಗೂ ನಂತರದ ಗೊಂದಲದ ವಾತಾವರಣದಲ್ಲಿ ಆ ಕ್ಷಣಕ್ಕೆ ಪೊಲೀಸರ ಬಳಿ ಅಶ್ರುವಾಯು  ಕೊರತೆ ಎದುರಾಗಿತ್ತು ಮತ್ತು ಪ್ರತಿಭಟನಕಾರರು ದಾಳಿ ನಡೆಸಬಹುದು ಎಂಬ ಭಯದಿಂದ ಪೊಲೀಸರು ಗುಂಡು ಹಾರಿಸಿದ್ದಾರೆಂದು ಇಲಾಖಾ ಮೂಲಗಳು ತಿಳಿಸಿವೆ ಎಂದು thenewsminute.com ವಿಶೇಷ ವರದಿ ತಿಳಿಸಿದೆ.

"ಪೊಲೀಸರು ಆರಂಭದಲ್ಲಿ ಅಶ್ರುವಾಯು ಸಿಡಿಸಿದ್ದರು. ಆದರೆ ಕಲ್ಲು ತೂರಾಟ ಮುಂದುವರಿದಾಗ ಪೊಲೀಸರ ಬಳಿ ಅಶ್ರುವಾಯು ಶೆಲ್ ಕೊರತೆ ಎದುರಾಯಿತು. ಅವುಗಳನ್ನು ಶೇಖರಿಸಿಡಲಾಗಿರುವ ಸ್ಥಳಕ್ಕೆ ತೆರಳುವ ಮೂರೂ ರಸ್ತೆಗಳು ಬಂದ್ ಆಗಿದ್ದರಿಂದ ಸಮಸ್ಯೆ ಎದುರಾಯಿತು. ಮೇಲಾಗಿ ಗಾಳಿಗೆ ವಿಮುಖವಾಗಿ ಪೊಲೀಸರು ಅಶ್ರುವಾಯು ಸಿಡಿಸಿದ್ದರಿಂದ ಅವುಗಳು ನಿರೀಕ್ಷಿತ ಪರಿಣಾಮ ಬೀರಿಲ್ಲ,' ಎಂದು ಮೂಲಗಳು ತಿಳಿಸಿವೆ ಎಂದು thenewsminute.com ವರದಿ ಮಾಡಿದೆ.

``ನಂತರ ಕೆಲ ಆಯ್ದ ಪೊಲೀಸ್ ಸಿಬ್ಬಂದಿಗೆ ಗುಂಡು ಹಾರಿಸಲು ಅನುಮತಿ ನೀಡಲಾಯಿತು, ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ನಂತರ ಪ್ರತಿಭಟನಾಕಾರರತ್ತ ಗುಂಡು ಹಾರಿಸಲಾಯಿತು'' ಎಂದು ಮೂಲಗಳು ತಿಳಿಸಿವೆ. ಆದರೆ ಪೊಲೀಸರು ಜಲಫಿರಂಗಿಗಳನ್ನು ಬಳಸಿಲ್ಲ, ಈ ವಿಚಾರವನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡ ಎತ್ತಿದ್ದರು.

ಶಿಷ್ಟಾಚಾರ ಏನು ಹೇಳುತ್ತದೆ?

ಶಿಷ್ಟಾಚಾರದ ಪ್ರಕಾರ ಪೊಲೀಸರು ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಸಿಡಿಸಿದ ನಂತರವೂ ಪರಿಸ್ಥಿತಿ ಹತೋಟಿಗೆ ಬಾರದೇ ಇದ್ದರೆ ಕೆಳಗಿನ ಮಟ್ಟದಲ್ಲಿ ಗುಂಡು ಹಾರಿಸಬಹುದು. ಗುಂಪು ಅಲ್ಲಿಂದ ಚದುರಿದರೆ ಗುಂಡು ಹಾರಾಟ ನಿಲ್ಲಿಸಬೇಕು ಹಾಗೂ ಬಂದೂಕು ಕೆಳಗಿನ ಮಟ್ಟದಲ್ಲಿ ಗುರಿಯಿರಿಸಿ ಗುಂಡು ಹಾರಿಸಬೇಕೆಂದು ನಿಯಮ ಹೇಳುತ್ತದೆ. ಆದರೆ ಮಂಗಳೂರಿನಲ್ಲಿ  ಪ್ರತಿಭಟನಾಕಾರರು ಪೊಲೀಸರಿಂದ ಬಹಳ ದೂರವಿದ್ದರೂ ಗುಂಡು ಹಾರಿಸಿರುವುದು ವೀಡಿಯೋ ದಾಖಲೆಗಳಿಂದ ತಿಳಿಯುತ್ತದೆ, ಮೃತಪಟ್ಟ ಜಲೀಲ್ ಪೊಲೀಸರಿಂದ 500ರಿಂದ 800 ಮೀಟರ್ ದೂರವಿದ್ದರೂ ಅವರ ಕಣ್ಣಿಗೆ ಗುಂಡು ತಾಗಿದ್ದರೆ, ನೌಶೀನ್ ಹೊಟ್ಟೆಗೆ ಗುಂಡು ಹೊಕ್ಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News