ಜನರನ್ನು ಪೊಲೀಸರೇ ರೊಚ್ಚಿಗೆಬ್ಬಿಸಿದರು: ವೀರಪ್ಪ ಮೊಯ್ಲಿ ಆರೋಪ

Update: 2019-12-25 15:04 GMT

ಮಂಗಳೂರು, ಡಿ. 25: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದ ಪ್ರತಿಭಟನಾಕಾರರ ಮೇಲೆ ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ಗೋಲಿಬಾರ್, ಹಿಂಸಾಚಾರಕ್ಕೆ ಪೊಲೀಸರೇ ಕಾರಣ. ಸಂಘಟನೆಯೊಂದು ಪ್ರತಿಭಟನೆಗೆ ಕರೆ ನೀಡಿದರೂ ಪೊಲೀಸರು ಸೆ.144 ಹಾಕಿ ಅದಕ್ಕೆ ತಡೆಯೊಡ್ಡಿದರು. ಮಾಹಿತಿ ತಿಳಿಯದೆ ಆಗಮಿಸಿದ ಪ್ರತಿಭಟನಾಕಾರರನ್ನು ಪೊಲೀಸರು ವಾಪಸ್ ಕಳುಹಿಸಬಹುದಿತ್ತು ಅಥವಾ ವಶಕ್ಕೆ ತೆಗೆದುಕೊಂಡು ಎಚ್ಚರಿಕೆ ನೀಡಬಹುದಿತ್ತು. ಆದರೆ, ಪೊಲೀಸರು ಅದನ್ನು ಮಾಡದೆ ಏಕಾಎಕಿ ಲಾಠಿಜಾರ್ಜ್, ಅಶ್ರುವಾಯಿ, ಫೈರಿಂಗ್ ಮಾಡಿ ಜನರನ್ನು ರೊಚ್ಚಿಗೆಬ್ಬಿಸಿದರು ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪೊಲೀಸರು ಮಂಗಳೂರಿನಲ್ಲಿ ಅತ್ಯಂತ ಕ್ರೌರ್ಯದಿಂದ ವರ್ತಿಸಿದ್ದಾರೆ. ಅಮಾಯಕರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡಿದ್ದಾರೆ. ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಈ ಬಗ್ಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದಲೇ ನ್ಯಾಯಾಂಗ ತನಿಖೆ ನಡೆಸಬೇಕು. ಬಿಜೆಪಿಗರು ಆರೋಪಿಸಿದಂತೆ ಇದರಲ್ಲಿ ಕೇರಳಿಗರು ಅಥವಾ ಕಾಂಗ್ರೆಸ್ಸಿಗರ ಪಾತ್ರ ಇದ್ದರೆ ತನಿಖೆಯಿಂದ ಬಯಲಾಗಲಿ ಎಂದು ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವರಾದ ಸುರೇಶ್ ಅಂಗಡಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸಿ.ಟಿ.ರವಿ ತಮ್ಮ ಹೇಳಿಕೆಗಳಲ್ಲಿ ‘ಬೆಂಕಿ’ಯನ್ನು ಪ್ರಸ್ತಾಪಿಸುತ್ತಾರೆ. ಆದರೆ, ಅವರ ವಿರುದ್ಧ ಪೊಲೀಸರು ಕ್ರಮ ಜರುಗಿಸುತ್ತಿಲ್ಲ. ಮೊನ್ನೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಟಿ ಖಾದರ್ ನೀಡಿದ ಹೇಳಿಕೆಗೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಮೊಯ್ಲಿ ನುಡಿದರು.

ಪರಿಹಾರ ಧನ ವಾಪಸ್ ಸರಿಯಲ್ಲ

ಗುಂಡೇಟಿಗೆ ಬಲಿಯಾದ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಅದನ್ನು ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಯ ಈ ನಿರ್ಧಾರ ಸರಿಯಲ್ಲ. ಬಹುಶಃ ರಾಜ್ಯದ ಯಾವೊಬ್ಬ ಮುಖ್ಯಮಂತ್ರಿಯೂ ಈವರೆಗೆ ಇಂತಹ ನಿರ್ಧಾರ ತೆಗೆದುಕೊಂಡ ಇತಿಹಾಸವಿಲ್ಲ. ಮುಖ್ಯಮಂತ್ರಿಯ ಅವಿವೇಕದ ನಿರ್ಧಾರಕ್ಕೆ ಇದು ಸಾಕ್ಷಿಯಾಗಿದೆ. ಯಡಿಯೂರಪ್ಪ ಬಿಜೆಪಿ ಪಕ್ಷದ ಮುಖ್ಯಮಂತ್ರಿಯಲ್ಲ, ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಲಿ ಎಂದು ವೀರಪ್ಪ ಮೊಯ್ಲಿ ಎಚ್ಚರಿಸಿದರು.

ಗೊಂದಲ ಸೃಷ್ಟಿ: ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ಮೂಲಕ ಸಾರ್ವಜನಿಕ ರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಹಿಂದೂ ಮುಸ್ಲಿಮರನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಪೌರತ್ವ ಸಾಬೀತುಪಡಿಸಲಾಗ ದವರಿಗೆ ದಿಗ್ಭಂಧನ ಕೇಂದ್ರ ತೆರೆಯುವ ಮೂಲಕ ಮುಸಲ್ಮಾನರಲ್ಲಿ ಆತಂಕ, ಅಭದ್ರತೆಯ ವಾತಾವರಣ ಸೃಷ್ಟಿಸುತ್ತಿದೆ ಎಂದು ಹೇಳಿದರು.

ಗುಂಡೇಟಿಗೆ ಬಲಿಯಾದವರ ಹೆಸರನ್ನು ಎಫ್‌ಐಆರ್‌ನಲ್ಲಿ ದಾಖಲಿಸಿರುವ ಬಗ್ಗೆ ಮೊನ್ನೆಯೇ ಮುಖ್ಯಮಂತ್ರಿಯ ಗಮನ ಸೆಳೆಯಲಾಗಿತ್ತು. ಆದಾಗ್ಯೂ ಅವರು ಪರಿಹಾರ ಘೋಷಿಸಿದ್ದರು. ಇದೀಗ ಯಾರದೋ ಮಾತಿಗೆ ತಲೆದೂಗಿ ಪರಿಹಾರ ವಾಪಸ್ ಪಡೆಯುವುದಾಗಿ ಹೇಳಿರುವುದು ಖಂಡನೀಯ. ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಂತೆ ಅವರು ಆಡಳಿತ ನಡೆಸಬೇಕೇ ವಿನಃ ಬಿಜೆಪಿಗರು ಹೇಳಿದಂತೆ ಆಡಳಿತ ನಡೆಸಬಾರದು. ಯಡಿಯೂರಪ್ಪ ಅತ್ಯಂತ ದುರ್ಬಲ ಮುಖ್ಯಮಂತ್ರಿ ಎಂಬುದು ಇದರಿಂದ ಸಾಬೀಯಾಗಿದೆ. ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ಮುಲ್ಕಿ ಠಾಣೆಗೆ ಬೆಂಕಿ ಹಚ್ಚಲು ಬಂದಿದ್ದಾರೆ ಎಂಬ ಆರೋಪದ ಮೇರೆಗೆ ಇಬ್ಬರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಅವರಿಗೆ ಬಿಜೆಪಿ ಸರಕಾರವೇ ಪರಿಹಾರ ನೀಡಿತ್ತು. ಇದೀಗ ನೌಶೀನ್, ಜಲೀಲ್ ಕುಟುಂಬಕ್ಕೆ ಪರಿಹಾರ ಕೊಡಲು ಮೀನಮೇಷ ಯಾಕೆ ಎಂದು ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಮಾಜಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್‌ಗಳಾದ ಶಶಿಧರ ಹೆಗ್ಡೆ, ಕೆ. ಭಾಸ್ಕರ ಮತ್ತಿತರರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News