ಎಲ್ಲಾ ಭಾರತೀಯರು ಹಿಂದುಗಳು ಎಂದ ಭಾಗ್ವತ್ ಹೇಳಿಕೆಗೆ ಕೇಂದ್ರ ಸಚಿವ ಆಕ್ಷೇಪ

Update: 2019-12-27 10:20 GMT
ಮೋಹನ್ ಭಾಗ್ವತ್

ಮುಂಬೈ: ದೇಶದ 130 ಕೋಟಿ ಜನರನ್ನು ಅವರ ಧರ್ಮ ಹಾಗೂ ಸಂಸ್ಕೃತಿ ಯಾವುದೇ ಇದ್ದರೂ ಅವರನ್ನು ಹಿಂದು ಸಮಾಜ ಎಂದು ಪರಿಗಣಿಸುವುದಾಗಿ ಇತ್ತೇಚೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರು ನೀಡಿರುವ ಹೇಳಿಕೆಗೆ ಬಿಜೆಪಿಯ ಮಿತ್ರ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಮುಖ್ಯಸ್ಥ ಹಾಗೂ ಕೇಂದ್ರ ಸಚಿವ ರಾಮದಾಸ್ ಅಠಾವಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಎಲ್ಲಾ ಭಾರತೀಯರನ್ನೂ ಹಿಂದುಗಳು ಎಂದು ಹೇಳುವುದು ಸರಿಯಾಗದು. ಒಂದು ಕಾಲದಲ್ಲಿ ನಮ್ಮ ದೇಶದಲ್ಲಿ ಎಲ್ಲರೂ ಬೌದ್ಧಧರ್ಮೀಯರಾಗಿದ್ದರು. ಎಲ್ಲರೂ ಭಾರತೀಯರು ಎಂಬರ್ಥದಲ್ಲಿ ಮೋಹನ್ ಭಾಗ್ವತ್ ಹೇಳಿದ್ದರೆ ಒಳ್ಳೆಯದು. ನಮ್ಮ ದೇಶದಲ್ಲಿ ಬೌದ್ಧ, ಸಿಖ್, ಹಿಂದು, ಕ್ರೈಸ್ತ, ಪಾರ್ಸಿ, ಜೈನ, ಹೀಗೆ ವಿಭಿನ್ನ ಸಮುದಾಯಗಳ ಜನರಿದ್ದಾರೆ,'' ಎಂದು ಕೇಂದ್ರ ಸಾಮಾಜಿಕ ನ್ಯಾಯ ಸಚಿವ ಅಠಾವಳೆ ಹೇಳಿದ್ದಾರೆ.

"ಭಾರತ ಮಾತೆಯ ಪುತ್ರರು ಯಾವುದೇ ಭಾಷೆ ಮಾತನಾಡಲಿ, ಯಾವುದೇ ಪ್ರಾಂತ್ಯದವರಿರಲಿ, ಯಾವುದೇ ದೇವರನ್ನು ಪೂಜಿಸಲಿ ಅವರು ಹಿಂದುಗಳು. ಈ ನಿಟ್ಟಿನಲ್ಲಿ ಸಂಘಕ್ಕೆ ಭಾರತದ ಎಲ್ಲಾ 130 ಕೋಟಿ ಜನರು ಹಿಂದು ಸಮಾಜ,'' ಎಂದು ಹೈದರಾಬಾದ್‍ನಲ್ಲಿ ಆರೆಸ್ಸೆಸ್ ಸಭೆಯೊಂದರಲ್ಲಿ ಭಾಗ್ವತ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News