ಭೀಮ್ ಆರ್ಮಿ ಮುಖ್ಯಸ್ಥರ ಬಿಡುಗಡೆಗೆ ಆಗ್ರಹಿಸಿ ಪ್ರಧಾನಿ ನಿವಾಸದತ್ತ ಹೊರಟ ಪ್ರತಿಭಟನಾಕಾರರಿಗೆ ಪೊಲೀಸರ ತಡೆ

Update: 2019-12-27 17:47 GMT
File Photo

 ಹೊಸದಿಲ್ಲಿ,ಡಿ.27: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದು, ರಾಜಧಾನಿ ಹೊಸದಿಲ್ಲಿಯಲ್ಲಿ ಶುಕ್ರವಾರ ಭೀಮ್ ಆರ್ಮಿಯ ಕಾರ್ಯಕರ್ತರು ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರೆ,ಹಳೆ ದಿಲ್ಲಿಯ ಜಾಮಿಯಾ ಮಸೀದಿ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು.

    ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ್ ಆಝಾದ್ ಬಿಡುಗಡೆಗೆ ಆಗ್ರಹಿಸಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ನೂರಾರು ಮಂದಿಯನ್ನು ಶುಕ್ರವಾರ ದಿಲ್ಲಿ ಪೊಲೀಸರು ತಡೆದಿದ್ದಾರೆ. ಕಪ್ಪುಬಟ್ಟೆಗಳಿಂದ ಕೈಗಳನ್ನು ಕಟ್ಟಿಕೊಂಡಿದ್ದ ಪ್ರತಿಭಟನಕಾರರು ದಿಲ್ಲಿ ಪೊಲೀಸರ ಬಿಗಿ ಬಂದೋಬಸ್ತ್ ಹಾಗೂ ಡ್ರೋನ್ ಕಣ್ಗಾವಲಿನ ನಡುವೆ ಜೊರ್ ಭಾಗ್‌ನಲ್ಲಿರುವ ದರ್ಗಾ ಶಾಯೆ ಮರ್ದಾನ್‌ನಿಂದ ಕಾಲ್ನಡಿಗೆ ಜಾಥಾವನ್ನು ಆರಂಭಿಸಿದರು.ಪ್ರತಿಭಟನೆಯ ವೇಳೆ ಹಿಂಸೆ ಹಾಗೂ ಗಲಭೆ ಸಂಭವಿಸಿದಲ್ಲಿ, ಅದಕ್ಕಾಗಿ ತಮ್ಮನ್ನು ದೂರಬಾರದೆಂಬ ಉದ್ದೇಶದಿಂದ ತಾವು ಕೈಗಳನ್ನು ಬಟ್ಟೆಯಿಂದ ಕಟ್ಟಿಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಆದರೆ ಪ್ರಧಾನಿ ನಿವಾಸದ ದಾರಿಯಲ್ಲಿರುವ ಲೋಕಲ್ಯಾಣ್ ಮಾರ್ಗ್ ಪ್ರದೇಶದ ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ತಡೆದುನಿಲ್ಲಿಸಿದರು.

 ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಂಧಿತ ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಝಾದ್ ಅವರ ಭಿತ್ತಿಚಿತ್ರಗಳನ್ನು ಹಿಡಿದಿದ್ದ ಪ್ರತಿಭಟನಕಾರರು ‘ತಾನಾಶಾಹಿ ನಹೀ ಚಲೇಗಿ’ ಎಂಬ ಘೋಷಣೆಗಳನ್ನು ಕೂಗಿದರು.

 ‘‘ನಮ್ಮ ಕೈಗಳನ್ನು ನಾವೇ ಬಿಗಿದುಕೊಂಡು, ಪ್ರತಿಭಟನೆ ನಡೆಸುತ್ತಿದ್ದೇವೆ. ಹೀಗಾಗಿ, ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿಲ್ಲವೆಂದು, ಸರಕಾರವು ನಮ್ಮ ಮೇಲೆ ಸುಳ್ಳು ಆರೋಪ ಹೊರಿಸುವಂತಿಲ್ಲ ’’ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಜೀದ್ ಜಮಾಲ್ ಎಂಬವರು ತಿಳಿಸಿದ್ದಾರೆ.

ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ವಜಹಾತ್ ಹಬೀಬುಲ್ಲಾ ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ ಪೌರತ್ವ ತಿದ್ದುಪಡಿ ಕಾಯ್ದೆಯು ಸಂವಿಧಾನದ ಮೂಲಭೂತ ತತ್ವಗಳಿಗೆ ವಿರುಧ್ಧವಾಗಿದೆಯೆಂದು ಹೇಳಿದರು.

‘‘ ಯಾವುದೇ ತಪ್ಪು ಎಸಗದಿದ್ದರೂ ಉತ್ತರಪ್ರದೇಶದಲ್ಲಿ ಜನರನ್ನು ಬಂಧಿಸಲಾಗುತ್ತಿದೆ. ನಾವು ಚುನಾಯಿಸುವ ಸಂಸತ್ ಸದಸ್ಯರು ಧ್ವನಿಯೆತ್ತದೆ ಇದ್ದಾಗ,ಜನರು ತಾವಾಗಿಯೇ ಧ್ವನಿಯೆತ್ತಲು ಬೀದಿಗಿಳಿಯುತ್ತಿದ್ದಾರೆಂಬುದನ್ನು ಸರಕಾರಕ್ಕೆ ನೆನಪಿಸಬೇಕಾದ ಅಗತ್ಯವಿದೆ’’ ಎಂದವರು ಹೇಳಿದ್ದಾರೆ.

 ಕಾಲ್ನಡಿಗೆ ಜಾಥಾ ಸಾಗುತ್ತಿದ್ದಾಗ ಡ್ರೋಣ್‌ಗಳು ಆಕಾಶದಲ್ಲಿ ಹಾರಾಡುತ್ತಾ ಪ್ರತಿಭಟನಕಾರರಮೇಲೆ ಕಣ್ಗಾವಲಿರಿಸಿದ್ದವು. ಲೋಕಕಲ್ಯಾಣ್ ಮಾರ್ಗದ ಬಳಿ ತಮ್ಮನ್ನು ತಡೆದ ಪೊಲೀಸರಿಗೆ ಪ್ರತಿಭಟನಕಾರರು ರ್ಯಾಲಿಯನ್ನು ಮುಂದುವರಿಸಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಪೊಲೀಸರು ಅದಕ್ಕೆ ಅನುಮತಿ ನಿರಾಕರಿಸಿದರು.

 ಕಳೆದ ಶುಕ್ರವಾರ ಹಳೆ ದಿಲ್ಲಿಯ ದರಿಯಾಗಂಜ್‌ನಲ್ಲಿ ಸಿಸಿಎ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಆಝಾದ್ ಅವರನ್ನು ಬಂಧಿಸಲಾಗಿತ್ತು.

   ಮತ್ತೊಂದು ಕಡೆ ಹಳೆ ದಿಲ್ಲಿಯ ಜಾಮಾ ಮಸೀದಿಯ ಹೊರಭಾಗದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ಹಾಗೂ ದಿಲ್ಲಿಯ ಮಾಜಿ ಶಾಸಕ ಶೊಯೆಬ್ ಇಕ್ಬಾಲ್ ಭಾಗವಹಿಸಿದ್ದರು. ನಿರುದ್ಯೋಗವು ಭಾರತದ ನೈಜ ಸಮಸ್ಯೆಯಾಗಿದೆ. ಪ್ರಧಾನಿ ಮೋದಿಯವರು ಅದನ್ನು ಬಗೆಹರಿಸಲು ಪ್ರಯತ್ನಿಸುವುದನ್ನು ಬಿಟ್ಟು, ಎನ್‌ಆರ್‌ಸಿ ( ರಾಷ್ಟ್ರೀಯ ಪೌರತ್ವ ನೋಂದಣಿ)ಗಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ಸಭೆಗೆ ನಿಷೇಧ

ಈ ಮಧ್ಯೆ ಈಶಾನ್ಯ ದಿಲ್ಲಿಯ ಜಫರಾಬಾದ್, ಸೀಲಂಪುರ ಹಾಗೂ ಉತ್ತರಪ್ರದೇಶ ಭವನದಲ್ಲಿ ಪ್ರತಿಭಟನಾ ಸಭೆಗಳನ್ನು ನಿಷೇಧಿಸಲಾಗಿದೆ. ಉತ್ತರಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ದೌರ್ಜನ್ಯವೆಸಗಿರುವುದನ್ನು ಖಂಡಿಸಿ ಜಾಮಿಯಾ ಮಿಲ್ಲಿಯಾ ವಿವಿಯ ವಿದ್ಯಾರ್ಥಿಗಳ ಉತ್ತರಪ್ರದೇಶ ಭವನ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News