×
Ad

ಸಿಎಎ ವಿರುದ್ಧ ಗೂಗಲ್, ಟಿಸಿಎಸ್ ಸೇರಿ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಗಳ ಉದ್ಯೋಗಿಗಳಿಂದ ಬಹಿರಂಗ ಪತ್ರ

Update: 2019-12-27 18:23 IST

ಬೆಂಗಳೂರು:  ಐಟಿ ಕ್ಷೇತ್ರದ ಪ್ರಮುಖ ಕಂಪೆನಿಗಳಾದ ಗೂಗಲ್, ಉಬರ್, ಅಮೆಝಾನ್, ಫೇಸ್ಬುಕ್, ಎಕ್ಸೆಂಚೂರ್, ಮೈಕ್ರೋಸಾಫ್ಟ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಎಚ್‍ಸಿಎಲ್, ವಿಪ್ರೋ ಸಹಿತ ಹಲವು ಸಂಸ್ಥೆಗಳ ಭಾರತೀಯ  ಹಾಗೂ ಭಾರತೀಯ ಮೂಲದ ಉದ್ಯೋಗಿಗಳು ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯಿದೆಗೆ  ವಿರೋಧ ವ್ಯಕ್ತಪಡಿಸಿ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ.

`ಟೆಕ್‍ಅಗೇನ್ಸ್ಟ್‍ಫ್ಯಾಸಿಸಂ' ಎಂಬ ಆನ್ಲೈನ್ ವೇದಿಕೆ ಮೂಲಕ ಈ  ಪತ್ರ ಹೊರಬಿದ್ದಿದ್ದು ಸರಕಾರದ ಈ ಕಾಯಿದೆ ಸಾವಿರಾರು ಮುಸ್ಲಿಮರನ್ನು ನಿರಾಶ್ರಿತರನ್ನಾಗಿಸಬಹುದೆಂಬ ಭಯ ಎಲ್ಲೆಡೆ ಮೂಡಿರುವ ಹಿನ್ನೆಲೆಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿನ ತನಕ ಸಾವಿರಾರು  ಟೆಕ್ಕಿಗಳು ಅದಕ್ಕೆ ಸಹಿ ಹಾಕಿದ್ದಾರೆ.

"ನಾವು ಐಟಿ ಕ್ಷೇತ್ರದ ಇಂಜಿನಿಯರುಗಳು, ಸಂಶೋಧಕರು, ಅನಾಲಿಸ್ಟ್ ಹಾಗೂ ಡಿಸೈನರ್‍ಗಳು ಫ್ಯಾಸಿಸ್ಟ್ ಭಾರತ ಸರಕಾರವನ್ನು ಹಾಗೂ ಅದು ನಾಗರಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸುತ್ತೇವೆ. ಪ್ರತಿಭಟನಾಕಾರರ ಮೇಳೆ ಸರಕಾರ ನಡೆಸುತ್ತಿರುವ ದೌರ್ಜನ್ಯ ತಕ್ಷಣ ನಿಲ್ಲಬೇಕು.'' ಎಂದು ಪತ್ರದಲ್ಲಿ ಬರೆಯಲಾಗಿದೆ.

"ಸಿಎಎ ಜತೆಗೆ ಎನ್‍ಆರ್‍ಸಿ ಸೇರಿದರೆ ಅದು ಬಹಳಷ್ಟು ಮುಸ್ಲಿಂ ವಿರೋಧಿಯಾಗಲಿದೆ, ಮುಸ್ಲಿಮರು ದೇಶವಿಲ್ಲದವರಂತಾಗುತ್ತಾರೆ ಹಾಗೂ ಭಾರತದ ಆರ್ಥಿಕ ಹಿಂಜರಿತದ ಜತೆ ಇದು ಇನ್ನಷ್ಟು ಸಮಸ್ಯೆ ಸೃಷ್ಟಿಸಲಿದೆ,'' ಎಂದು ಪತ್ರದಲ್ಲಿ ಬರೆಯಲಾಗಿದೆ.

ಭಾರತೀಯ ಮೂಲದವರಾದ ಆಲ್ಫಬೆಟ್ ಸಂಸ್ಥೆಯ ಸುಂದರ್ ಪಿಚೈ, ಮೈಕ್ರೋಸಾಫ್ಟ್ ನ ಸತ್ಯ ನಡೆಲ್ಲಾ, ರಿಲಯನ್ಸ್ ಇಂಡಸ್ಟ್ರೀಸ್‍ನ ಅಧ್ಯಕ್ಷ ಮುಕೇಶ್ ಅಂಬಾನಿ ಹೊರತಾಗಿ ಉಬರ್ ಸಿಇಒ ದಾರ ಖೊಸ್ರವಶಾಹಿ ಹಾಗೂ ಫೇಸ್‍ಬುಕ್ ಸಿಇಒ ಮಾರ್ಕ್ ಝರ್ಕೆಬರ್ಗ್ ಕೂಡ  ಸರಕಾರದ ನಿಲುವನ್ನು ವಿರೋಧಿಸಬೇಕು ಎಂದು ಪತ್ರದಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News