ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ, ಬೆಂಬಲಿಸಿ ರ್ಯಾಲಿ
ಮುಂಬೈ, ಡಿ. 27: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತು ಶುಕ್ರವಾರ ಮುಂಬೈಯಲ್ಲಿ 4 ಕಿ.ಮೀ. ಅಂತರದಲ್ಲಿ ಶಾಂತಿಯುತ ಪ್ರತಿಭಟನೆ ಹಾಗೂ ರ್ಯಾಲಿ ನಡೆಯಿತು. ಒಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ, ಇನ್ನೊಂದು ಬೆಂಬಲಿಸಿ ನಡೆಯಿತು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಕ್ಷಿಣ ಮುಂಬೈಯ ಆಝಾದ್ ಮೈದಾನದಲ್ಲಿ ನೂರಾರು ವಿದ್ಯಾರ್ಥಿಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ಅಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರವಾಗಿ ನೂರಾರು ಜನರು ರ್ಯಾಲಿ ನಡೆಸಿದರು. ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯ ಸಂಯೋಜನೆ ನಗದು ನಿಷೇಧ ಪುನರಾವರ್ತನೆಯಾದಂತೆ ಆಗಲಿದೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಆಝಾದ್ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹೋರಾಟಗಾರರೋರ್ವರು ಹೇಳಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಕೇವಲ ಧಾರ್ಮಿಕ ವಿಷಯ ಅಲ್ಲ. ಅದು ಎಲ್ಲರ ಮೇಲೆ ಕೂಡ ದುಷ್ಪರಿಣಾಮ ಉಂಟು ಮಾಡಲಿದೆ. ನಾವು ನಗದು ನಿಷೇಧದ ಭಾಗ-2ನ್ನು ಬಯಸುವುದಿಲ್ಲ ಎಂದು ಇನ್ನೋರ್ವ ಹೋರಾಟಗಾರರು ಹೇಳಿದ್ದಾರೆ. ಇದು ಸರ್ವಾಧಿಕಾರಿ ಆಡಳಿತ. ನಾವು ಏನನ್ನೂ ಮಾಡಬಹುದು ಎಂದು ಈ ಸರಕಾರ ಭಾವಿಸಿದೆ. ಸಂವಿಧಾನವನ್ನು ರಕ್ಷಿಸುವುದು ಹಾಗೂ ವಿರೋಧಿಸದೇ ಇರುವುದು ಈ ಸರಕಾರದ ಜವಾಬ್ದಾರಿ ಎಂದು ಮತ್ತೋರ್ವ ಹೋರಾಟಗಾರ ಹೇಳಿದ್ದಾರೆ. ಆಝಾದ್ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವು ನಟ-ನಟಿಯರು ಹಾಗೂ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.
ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್ಯಾಲಿಯ ನೇತೃತ್ವವನ್ನು ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಹಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಪರ ರ್ಯಾಲಿಯ ಸಭಾ ಕಾರ್ಯಕ್ರಮ ನಡೆದ ವೇದಿಕೆಯಲ್ಲಿ ಭಾರತದ ಧ್ವಜ ಹಾಗೂ ಸಾವರ್ಕರ್ ಅವರ ಫೋಟೊಗಳು ಕಂಡು ಬಂದವು. ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾರ್ವಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಳೆದ ವಾರ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಂಬೈಯಲ್ಲದೆ ದಿಲ್ಲಿ ಹಾಗೂ ಕೋಲ್ಕತ್ತಾದಲ್ಲಿ ಕೂಡ ಇಂದು ಪ್ರತಿಭಟನೆ ನಡೆಯಿತು.