'ನಿಮ್ಮ ಕೆಲಸ ನೋಡಿಕೊಳ್ಳಿ': ಸಿಎಎ ಪ್ರತಿಭಟನೆ ಟೀಕಿಸಿದ್ದ ಸೇನಾ ಮುಖ್ಯಸ್ಥರಿಗೆ ಚಿದಂಬರಂ

Update: 2019-12-28 14:18 GMT
file photo

ತಿರುವನಂತಪುರ,ಡಿ.28: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳ ನಾಯಕರನ್ನು ಟೀಕಿಸಿದ್ದ ಸೇನಾ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರ ವಿರುದ್ಧ ಶನಿವಾರ ಇಲ್ಲಿ ತೀವ್ರ ಟೀಕಾಪ್ರಹಾರ ನಡೆಸಿದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು “ನಿಮ್ಮ ಕೆಲಸವೇನಿದೆಯೋ ಅಷ್ಟನ್ನೇ ನೋಡಿಕೊಳ್ಳಿ” ಎಂದು ಅವರಿಗೆ ಸೂಚಿಸಿದ್ದಾರೆ.

  ಕೇರಳ ಕಾಂಗ್ರೆಸ್ ಘಟಕವು ಸಿಎಎ ವಿರೋಧಿಸಿ ಇಲ್ಲಿಯ ರಾಜಭವನದ ಎದುರು ಹಮ್ಮಿಕೊಂಡಿದ್ದ ‘ಮಹಾ ರ್ಯಾಲಿ’ಯಲ್ಲಿ ಮಾತನಾಡಿದ ಚಿದಂಬರಂ,ಸರಕಾರವನ್ನು ಬೆಂಬಲಿಸಿ ಮಾತನಾಡುವಂತೆ ಸೇನಾ ಮುಖ್ಯಸ್ಥರು ಮತ್ತು ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಲಾಗಿದ್ದು,ಇದು ನಾಚಿಕೆಗೇಡಿನದಾಗಿದೆ ಎಂದು ಆರೋಪಿಸಿದರು.

 “ನೀವು ಸೇನಾ ಮುಖ್ಯಸ್ಥರು ಮತ್ತು ನಿಮ್ಮ ಕೆಲಸವೇನಿದೆಯೋ ಅದನ್ನು ಮಾಡಿಕೊಂಡು ಹೋಗಿ. ರಾಜಕಾರಣಿಗಳು ಏನನ್ನು ಮಾಡಬೇಕೋ ಅದನ್ನು ಮಾಡುತ್ತಾರೆ ಎಂದು ಜ.ರಾವತ್ ಅವರಿಗೆ ತಿಳಿಸಬಯಸುತ್ತೇನೆ. ಯುದ್ಧವನ್ನು ಹೇಗೆ ಹೋರಾಡಬೇಕು ಎಂದು ಹೇಳುವುದು ಹೇಗೆ ನಮ್ಮ ಕೆಲಸವಲ್ಲವೋ ಹಾಗೆಯೇ ನಾವು ರಾಜಕಾರಣಿಗಳು ಏನು ಮಾಡಬೇಕು ಎಂದು ಹೇಳುವುದು ಸೇನೆಯ ಕೆಲಸವಲ್ಲ. ನಿಮ್ಮ ಯೋಜನೆಗಳಂತೆ ನೀವು ಯುದ್ಧವನ್ನು ನಡೆಸಿ ಮತ್ತು ನಾವು ದೇಶದ ರಾಜಕೀಯವನ್ನು ನಿಭಾಯಿಸುತ್ತೇವೆ” ಎಂದರು.

ಗುರುವಾರ ದಿಲ್ಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜ.ರಾವತ್ ಸಿಎಎ ವಿರುದ್ಧದ ಪ್ರತಿಭಟನೆಗಳನ್ನು ಟೀಕಿಸುತ್ತ,ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದಲ್ಲಿ ತೊಡಗಿಕೊಳ್ಳಲು ವಿದ್ಯಾರ್ಥಿಗಳು ಸೇರಿದಂತೆ ಜನಸಮೂಹಕ್ಕೆ ತಪ್ಪು ಮಾರ್ಗದರ್ಶನ ನೀಡುವುದು ನಾಯಕತ್ವವಲ್ಲ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News