ರೊಹಿಂಗ್ಯನ್ನರ ಮಾನವ ಹಕ್ಕು ದಮನ: ವಿಶ್ವಸಂಸ್ಥೆ ಖಂಡನೆ

Update: 2019-12-28 15:05 GMT
file photo

ವಿಶ್ವಸಂಸ್ಥೆ, ಡಿ.28: ಮ್ಯಾನ್ಮಾರ್‌ನ ರೊಹಿಂಗ್ಯಾ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರ ವಿರುದ್ಧ ಅನಿಯಂತ್ರಿತ ಬಂಧನ, ಚಿತ್ರಹಿಂಸೆ, ಅತ್ಯಾಚಾರ, ಬಂಧನದಲ್ಲಿರುವಾಗ ಸಾವಿನ ಪ್ರಕರಣ ಮುಂತಾದ ರೀತಿಯಲ್ಲಿ ಮಾನವ ಹಕ್ಕು ದಮನವಾಗುತ್ತಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಕಟುವಾಗಿ ಖಂಡಿಸಲಾಗಿದೆ.

ಮ್ಯಾನ್ಮಾರ್‌ನ ರಖೈನ್, ಕಚಿನ್ ಮತ್ತು ಶಾನ್ ರಾಜ್ಯಗಳಲ್ಲಿ ರೊಹಿಂಗ್ಯಾಗಳು ಹಾಗೂ ಇತರ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಪ್ರಚೋದನೆ ಘಟನೆಗಳ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ ಮ್ಯಾನ್ಮಾರ್‌ನ ಸರಕಾರವನ್ನು ಆಗ್ರಹಿಸುವ ನಿರ್ಣಯವನ್ನು 134-9 ಮತಗಳಿಂದ ಅಂಗೀಕರಿಸಲಾಯಿತು. 28 ಸದಸ್ಯ ರಾಷ್ಟ್ರಗಳು ಗೈರು ಹಾಜರಾಗಿದ್ದವು. ಹೋರಾಟ ಮತ್ತು ವೈಷಮ್ಯವನ್ನು ತಕ್ಷಣದಿಂದ ಕೊನೆಗೊಳಿಸುವಂತೆ ನಿರ್ಣಯ ಆಗ್ರಹಿಸಿದೆ.

ಸಾಮಾನ್ಯ ಸಭೆಯ ನಿರ್ಣಯಕ್ಕೆ ಕಾನೂನು ಬದ್ಧತೆ ಇಲ್ಲದಿದ್ದರೂ ಇದು ಜಾಗತಿಕ ಸಮುದಾಯದ ಅಭಿಪ್ರಾಯವೆಂದು ಪರಿಗಣಿಸಲಾಗುತ್ತದೆ. ರಖೈನ್ ಪ್ರಾಂತ್ಯದಲ್ಲಿ ಸೇನೆ, ಭದ್ರತಾ ಪಡೆ ಹಾಗೂ ಸಶಸ್ತ್ರ ಪಡೆಗಳು ನಿಶ್ಯಸ್ತ್ರ ನಾಗರಿಕರ ವಿರುದ್ಧ ಬಲಪ್ರಯೋಗ ಮಾಡುವ ಮೂಲಕ ಮಾನವ ಹಕ್ಕು ಮತ್ತು ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸುವ ಪ್ರಕರಣ ಮುಂದುವರಿದಿರುವುದು ತೀವ್ರ ಆಘಾತಕಾರಿಯಾಗಿದೆ. ಮ್ಯಾನ್ಮಾರ್‌ನ ಪಡೆಗಳು ಎಲ್ಲರನ್ನೂ ರಕ್ಷಿಸುವ, ಎಲ್ಲರಿಗೂ ನ್ಯಾಯ ಒದಗಿಸುವ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ಕರೆ ನೀಡಲಾಗಿದೆ. ಅಲ್ಲದೆ ಸ್ವತಂತ್ರ ಅಂತರಾಷ್ಟ್ರೀಯ ಸತ್ಯಶೋಧನಾ ತಂಡದ ವರದಿಯ ಬಗ್ಗೆಯೂ ಸಾಮಾನ್ಯ ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ. ರೊಹಿಂಗ್ಯಾ ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತರ ಸಾಮೂಹಿಕ ಮಾನವ ಹಕ್ಕು ಉಲ್ಲಂಘನೆಯ ಹಾಗೂ ಇವರ ವಿರುದ್ಧ ಭದ್ರತಾ ಪಡೆಗಳು ನಡೆದುಕೊಂಡಿರುವ ರೀತಿಯು ನಿಸ್ಸಂದೇಹವಾಗಿ ಅಂತರಾಷ್ಟ್ರೀಯ ಕಾನೂನಿನಡಿ ಗಂಭೀರ ಅಪರಾಧವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯವು ಮ್ಯಾನ್ಮಾರ್‌ನ ಮೇಲೆ ಅನಗತ್ಯ ರಾಜಕೀಯ ಒತ್ತಡ ಹೇರುವ ಉದ್ದೇಶವಿರುವ, ಮಾನವಹಕ್ಕು ವಿಷಯದಲ್ಲಿ ಇಬ್ಬಗೆಯ ಮಾನದಂಡ ಹಾಗೂ ತಾರತಮ್ಯದ ಧೋರಣೆಯುಳ್ಳ ಪ್ರಕ್ರಿಯೆಯಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಮ್ಯಾನ್ಮಾರ್‌ನ ರಾಯಭಾರಿ ಪ್ರತಿಕ್ರಿಯಿಸಿದ್ದಾರೆ. ರಖೈನ್ ರಾಜ್ಯದಲ್ಲಿರುವ ಸಂಕೀರ್ಣ ಪರಿಸ್ಥಿತಿಗೆ ಪರಿಹಾರ ರೂಪಿಸುವ ಪ್ರಯತ್ನ ಮಾಡದೆ, ಸವಾಲುಗಳನ್ನು ಎದುರಿಸಲು ಮ್ಯಾನ್ಮಾರ್ ಸರಕಾರ ನಡೆಸಿರುವ ಪ್ರಯತ್ನವನ್ನು ಪರಿಗಣಿಸಲು ನಿರಾಕರಿಸಿದ ನಿರ್ಣಯ ಇದಾಗಿದೆ ಎಂದವರು ಟೀಕಿಸಿದ್ದಾರೆ. ನಿರ್ಣಯವು ಮ್ಯಾನ್ಮಾರ್‌ನಲ್ಲಿ ಅಪನಂಬಿಕೆಯ ಬೀಜವನ್ನು ಬಿತ್ತುವ ಜೊತೆಗೆ ಇಲ್ಲಿ ವಿವಿಧ ಕೋಮುಗಳ ಧ್ರುವೀಕರಣ ಹೆಚ್ಚಿಸುವ ಮೂಲಕ ಮತ್ತಷ್ಟು ಸಮಸ್ಯೆಗೆ ಕಾರಣವಾಗಲಿದೆ ಎಂದವರು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News