ಬ್ಯಾಂಕುಗಳ ಕೆಟ್ಟ ಸಾಲಗಳು ಮತ್ತೆ ಹೆಚ್ಚಬಹುದು: ಆರ್‌ಬಿಐ ಎಚ್ಚರಿಕೆ

Update: 2019-12-28 15:12 GMT

ಮುಂಬೈ,ಡಿ.28: ಮುಖ್ಯವಾಗಿ ದುರ್ಬಲಗೊಂಡಿರುವ ಸ್ಥೂಲ ಆರ್ಥಿಕತೆ, ಸಾಲಗಳ ಮರುವಸೂಲಾತಿಯಲ್ಲಿ ಹೆಚ್ಚಿನ ವೈಫಲ್ಯ ಮತ್ತು ಸಾಲಗಳಿಗೆ ಕುಸಿದಿರುವ ಬೇಡಿಕೆಯಿಂದಾಗಿ ಬ್ಯಾಂಕುಗಳ ಕೆಟ್ಟ ಸಾಲಗಳು ಮುಂದಿನ ಒಂಭತ್ತು ತಿಂಗಳುಗಳಲ್ಲಿ ಮತ್ತೆ ಹೆಚ್ಚಾಗಬಹುದು ಎಂದು ಆರ್‌ಬಿಐ ಎಚ್ಚರಿಕೆ ನೀಡಿದೆ.

ಪ್ರತಿ ವರ್ಷ ಜೂನ್ ಮತ್ತು ಡಿಸೆಂಬರ್‌ನಲ್ಲಿ ಪ್ರಕಟಗೊಳ್ಳುವ ಆರ್‌ಬಿಐನ ಹಣಕಾಸು ಸ್ಥಿರತೆ ವರದಿ (ಎಫ್‌ಎಸ್‌ಆರ್)ಯು ಮಧ್ಯಮ ರೇಟಿಂಗ್ ಹೊಂದಿರುವ ಕಂಪನಿಗಳಿಂದ ತಮಗೆ ಬೇಕಾದ ರೇಟಿಂಗ್ ಪಡೆದುಕೊಳ್ಳಲು ‘ರೇಟಿಂಗ್ ಶಾಪಿಂಗ್’ನ ಶಂಕಿತ ಪ್ರಕರಣಗಳತ್ತಲೂ ಬೆಟ್ಟು ಮಾಡಿದೆ.

 ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಬಳಿ ಬೇಕಾದಷ್ಟು ಹಣವಿರುವುದರಿಂದ ಅವುಗಳಿಗೆ ಈಗ ಸಾಲಗಳ ಅಗತ್ಯವಿಲ್ಲ ಮತ್ತು ಇದು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಲ ನೀಡಿಕೆಯ ಪ್ರಮಾಣ ಕಡಿಮೆಯಾಗಲು ಕಾರಣಗಳಲ್ಲೊಂದಾಗಿದೆ ಎಂದು ತಿಳಿಸಿರುವ ವರದಿಯು,ಸೆಪ್ಟೆಂಬರ್ 2019ಕ್ಕೆ ಅಂತ್ಯಗೊಂಡ ವರ್ಷದಲ್ಲಿ ಸರಕಾರಿ ಬ್ಯಾಂಕುಗಳ ಸಾಲ ಬೆಳವಣಿಗೆ ದರ ಶೇ.8.7ಕ್ಕೆ ಕುಸಿದಿದ್ದರೆ, ಖಾಸಗಿ ಬ್ಯಾಂಕುಗಳಲ್ಲಿ ಇದು ಶೇ.16.5ರಷ್ಟಿದೆ ಎಂದು ಹೇಳಿದೆ.

2019 ಸೆಪ್ಟೆಂಬರ್‌ನಲ್ಲಿ ಸರಕಾರದಿಂದ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಮರುಬಂಡವಾಳೀಕರಣದ ಬಳಿಕ ಭಾರತೀಯ ಬ್ಯಾಂಕುಗಳ ಬಂಡವಾಳ ಪರ್ಯಾಪ್ತತೆ ಅನುಪಾತ (ಸಿಎಆರ್)ವು ಗಣನೀಯವಾಗಿ ಶೇ.15.1ಕ್ಕೆ ಏರಿಕೆಯಾಗಿದೆ ಎಂದು ಎಚ್ಚರಿಕೆ ನೀಡಿರುವ ಆರ್‌ಬಿಐ, ಪ್ರೊವಿಜನ್ ಕವರೇಜ್ ರೇಷಿಯೊ ಅಂದರೆ ಬ್ಯಾಂಕಿನ ಲಾಭದಲ್ಲಿ ಕೆಟ್ಟ ಸಾಲಗಳ ಹೊಂದಾಣಿಕೆಗಾಗಿ ಮೀಸಲಿಡುವ ಹಣದ ಪ್ರಮಾಣವೂ ಒಂದು ವರ್ಷದ ಹಿಂದಿನ ಶೇ.60.5ರಿಂದ ಶೇ.61.5ಕ್ಕೆ ಏರಿಕೆಯಾಗಿದೆ ಎಂದಿದೆ.

ಸ್ಥೂಲ ಆರ್ಥಿಕತೆಯ ಚಿತ್ರಣದಲ್ಲಿ ಬದಲಾವಣೆ,ಸಾಲ ವಸೂಲಾತಿಯ ವೈಫಲ್ಯದಲ್ಲಿ ಏರಿಕೆ ಮತ್ತು ಕುಂಠಿತಗೊಳ್ಳುತ್ತಿರುವ ಸಾಲ ಬೆಳವಣಿಗೆ ಇವುಗಳಿಂದಾಗಿ ಸೆಪ್ಟೆಂಬರ್ 2019ರಲ್ಲಿ ಶೇ.9.3ರಷ್ಟಿರುವ ಬ್ಯಾಂಕುಗಳ ಒಟ್ಟು ಅನುತ್ಪಾದಕ ಆಸ್ತಿ ಅನುಪಾತವು ಸೆಪ್ಟೆಂಬರ್ 2020ರಲ್ಲಿ ಶೇ.9.9ಕ್ಕೆ ಏರಿಕೆಯಾಗಬಹುದು ಎಂದು ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News