ಕಣ್ಣೂರು ವಿ.ವಿ.ಯಲ್ಲಿ ಕೇರಳ ರಾಜ್ಯಪಾಲರ ವಿರುದ್ಧ ಇತಿಹಾಸಕಾರ ಇರ್ಫಾನ್ ಹಬೀಬ್ ಸಹಿತ ಹಲವರಿಂದ ಪ್ರತಿಭಟನೆ
ಹೊಸದಿಲ್ಲಿ, ಡಿ. 28: ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಇಂಡಿಯನ್ ಹಿಸ್ಟೊರಿ ಕಾಂಗ್ರೆಸ್‌ನಲ್ಲಿ ಶನಿವಾರ ಭಾಷಣ ಮಾಡಿದ ಸಂದರ್ಭ ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಇತಿಹಾಸಕಾರ ಇರ್ಫಾನ್ ಹಬೀಬ್ ಸಹಿತ ಕೆಲವು ಪ್ರತಿನಿಧಿಗಳಿಂದ ಪ್ರತಿಭಟನೆ ಎದುರಿಸಬೇಕಾಯಿತು.
ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಇಂಡಿಯನ್ ಹಿಸ್ಟೊರಿ ಕಾಂಗ್ರೆಸ್‌ನ 80ನೇ ಅಧಿವೇಶನವನ್ನು ಉದ್ಘಾಟಿಸಿ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕಾಶ್ಮೀರದ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದಾಗ ಈ ಘಟನೆ ನಡೆಯಿತು. ಈ ವಿಷಯದ ಕುರಿತು ಮಾತನಾಡಿದ ಸಂದರ್ಭ ರಾಜ್ಯಪಾಲರು ಮೌಲನಾ ಆಝಾದ್ ಅವರನ್ನು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಹಬೀಬ್ ಹಾಗೂ ಕೆಲವು ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು. ಹಬೀಬ್ ಅವರು ಆಝಾದ್ ಅಥವಾ ಗಾಂಧಿಯಂತಹ ನಾಯಕರನ್ನು ಉಲ್ಲೇಖಿಸುವ ಬದಲು ಮಹಾತ್ಮಾ ಗಾಂಧಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆಯನ್ನು ಉಲ್ಲೇಖಿಸುವಂತೆ ಖಾನ್ ಅವರಲ್ಲಿ ವ್ಯಂಗ್ಯವಾಗಿ ಹೇಳಿದರು.
ಸಭಾಂಗಣದಲ್ಲಿ ಎದುರು ಕುಳಿತುಕೊಂಡವರು ಪ್ರತಿಭಟನೆ ಆರಂಭಿಸಿದಾಗ ಪ್ರತಿಕ್ರಿಯಿಸಿದ ಖಾನ್, ‘‘ಪ್ರತಿಭಟನೆ ನಡೆಸುವ ಎಲ್ಲಾ ಹಕ್ಕು ನಿಮಗಿದೆ. ಆದರೆ, ನೀವು ನನ್ನ ವಿರುದ್ಧ ಘೋಷಣೆಗಳನ್ನು ಕೂಗಲು ಸಾಧ್ಯವಿಲ್ಲ. ಚರ್ಚೆ ಹಾಗೂ ವಾದಕ್ಕೆ ನೀವು ಬಾಗಿಲು ಮುಚ್ಚುತ್ತೀರಿ ಎಂದಾದರೆ, ಹಿಂಸಾಚಾರವನ್ನು ಉತ್ತೇಜಿಸುತ್ತೀರಿ ಎಂದರ್ಥ’’ ಎಂದರು. ‘‘ನಾನು ಹಬೀಬ್ ಅವರು ಎತ್ತಿದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಿದೆ. ರಾಜ್ಯಪಾಲನಾಗಿ ನಾನು ಸಂವಿಧಾನವನ್ನು ರಕ್ಷಿಸುವ ಕರ್ತವ್ಯಕ್ಕೆ ಬದ್ಧನಾಗಿದ್ದೇನೆ. ಆದರೆ, ಅವರು ನನ್ನ ಭಾಷಣಕ್ಕೆ ಅಡ್ಡಿ ಪಡಿಸಲು ಯತ್ನಿಸಿದರು’’ ಎಂದು ಆರಿಫ್ ಮುಹಮ್ಮದ್ ಖಾನ್ ಹೇಳಿದ್ದಾರೆ.