ಬಾಕ್ಸಿಂಗ್ ಡೇ ಟೆಸ್ಟ್: ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ಭರ್ಜರಿ ಜಯ

Update: 2019-12-30 05:01 GMT

ಮೆಲ್ಬೋರ್ನ್, ಡಿ.29: ನ್ಯೂಝಿಲ್ಯಾಂಡ್ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಗೊಂಚಲು ಕಬಳಿಸಿದ ಸ್ಪಿನ್ನರ್ ನಥಾನ್ ಲಿಯೊನ್ ನೆರವಿನಿಂದ ಆಸ್ಟ್ರೇಲಿಯ ತಂಡ 247 ರನ್‌ಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಯೊಂದಿಗೆ ಸರಣಿ ವಶಪಡಿಸಿಕೊಂಡಿದೆ.

ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 4ನೇ ದಿನವಾದ ರವಿವಾರ ಕಿವೀಸ್ ತಂಡಕ್ಕೆ ಗೆಲ್ಲಲು 488 ರನ್ ಗುರಿ ನೀಡಿದ ಟಿಮ್ ಪೈನ್ ಬಳಗ ಶಿಸ್ತುಬದ್ದ ಬೌಲಿಂಗ್ ಪ್ರದರ್ಶಿಸಿ ಎದುರಾಳಿ ತಂಡವನ್ನು 240 ರನ್‌ಗೆ ನಿಯಂತ್ರಿಸಿತು.

ಆಸ್ಟ್ರೇಲಿಯ ತನ್ನ ನೆರೆಯ ರಾಷ್ಟ್ರ ನ್ಯೂಝಿಲ್ಯಾಂಡ್ ವಿರುದ್ಧ ಕಳೆದ 25 ವರ್ಷದಿಂದ ಅಜೇಯ ಗೆಲುವಿನ ಓಟವನ್ನು ಕಾಯ್ದುಕೊಂಡಿದೆ. ಆತಿಥೇಯರು ಸರಣಿ ಜಯಿಸಿದ ಕಾರಣ ಈ ವಾರ ಸಿಡ್ನಿಯಲ್ಲಿ ನಡೆಯುವ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಕಿವೀಸ್ ಕೇವಲ ಪ್ರತಿಷ್ಠೆಗಾಗಿ ಆಡಲಿದೆ.

ಪರ್ತ್‌ನಲ್ಲಿ ನಡೆದ ಡೇ-ನೈಟ್ ಟೆಸ್ಟ್ ನಲ್ಲಿ ವಿಲಿಯಮ್ಸನ್ ಬಳಗವನ್ನು 296 ರನ್‌ಗಳಿಂದ ಮಣಿಸಿದ್ದ ಆಸ್ಟ್ರೇಲಿಯ ತಂಡ ಇಂಗ್ಲೆಂಡ್‌ನಲ್ಲಿ ಆ್ಯಶಸ್ ಸರಣಿಯನ್ನು ಉಳಿಸಿಕೊಂಡ ಬಳಿಕ ಸತತ ನಾಲ್ಕನೇ ಟೆಸ್ಟ್ ಪಂದ್ಯವನ್ನು ಜಯಿಸಿತು.

ಗೆಲ್ಲಲು ಕಠಿಣ ಗುರಿ ಪಡೆದಿದ್ದ ಕಿವೀಸ್ ಪರ ಆರಂಭಿಕ ಆಟಗಾರ ಟಾಮ್ ಬ್ಲಂಡೆಲ್ ಶತಕದ ಮೂಲಕ ಗೆಲುವಿನ ವಿಶ್ವಾಸ ಮೂಡಿಸಿದ್ದರು. ಬ್ಲಂಡೆಲ್ 210 ಎಸೆತಗಳ ಇನಿಂಗ್ಸ್‌ನಲ್ಲಿ 15 ಬೌಂಡರಿಗಳ ಸಹಿತ 121 ರನ್ ಗಳಿಸಿದ್ದು, ಅವರಿಗೆ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಆರಂಭದಲ್ಲೇ ಜೇಮ್ಸ್ ಪ್ಯಾಟಿನ್ಸನ್(3-35)ಹೊಡೆತಕ್ಕೆ ತತ್ತರಿಸಿದ್ದ ಕಿವೀಸ್ ಟೀ ವಿರಾಮದ ವೇಳೆಗೆ 131 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಿಕೊಲ್ಸ್(33),ವಾಟ್ಲಿಂಗ್(22),ಗ್ರಾಂಡ್‌ಹೋಮ್(9) ಹಾಗೂ ಸ್ಯಾಂಟ್ನರ್(27) ವಿಕೆಟ್‌ಗಳನ್ನು ಉರುಳಿಸಿದ ಲಿಯೊನ್ ಕಿವೀಸ್‌ಗೆ ಭಾರೀ ಶಾಕ್ ನೀಡಿದರು. ಕೈ ಮುರಿತಕ್ಕೆ ಒಳಗಾಗಿದ್ದ ಟ್ರೆಂಟ್ ಬೌಲ್ಟ್ ಬ್ಯಾಟಿಂಗ್‌ಗೆ ಇಳಿಯಲಿಲ್ಲ. ಅಗ್ರ ಸ್ಕೋರರ್ ಬ್ಲಂಡೆಲ್ ವಿಕೆಟ್ ಪಡೆದ ಪಾರ್ಟ್ ಟೈಮ್ ಲೆಗ್ ಸ್ಪಿನ್ನರ್ ಲ್ಯಾಬುಶೆನ್, ನ್ಯೂಝಿಲ್ಯಾಂಡ್‌ನ್ನು 2ನೇ ಇನಿಂಗ್ಸ್‌ನಲ್ಲಿ 240 ರನ್‌ಗೆ ಆಲೌಟ್ ಮಾಡಿದರು.

ಇದಕ್ಕೂ ಮೊದಲು 4 ವಿಕೆಟ್‌ಗಳ ನಷ್ಟಕ್ಕೆ 137 ರನ್‌ನಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಆಸ್ಟ್ರೇಲಿಯ 54.2 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.

ಔಟಾಗದೆ 12 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಹೆಡ್(28, 64 ಎಸೆತ) ಹಾಗೂ ವೇಡ್(ಔಟಾಗದೆ 30, 54 ಎಸೆತ)5ನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿದರು. ಹೆಡ್ ಔಟಾದ ಬೆನ್ನಿಗೇ ನಾಯಕ ಪೈನ್ ಆಸ್ಟ್ರೇಲಿಯದ ಇನಿಂಗ್ಸ್ ಡಿಕ್ಲೇರ್ ಮಾಡಿದರು.

ನ್ಯೂಝಿಲ್ಯಾಂಡ್‌ನ ಪರ ವಾಗ್ನರ್(3-50)ಯಶಸ್ವಿ ಬೌಲರ್ ಎನಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News