×
Ad

ಮೊದಲ ಟೆಸ್ಟ್: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Update: 2019-12-29 23:42 IST

ಸೆಂಚೂರಿಯನ್, ಡಿ.29: ಕಾಗಿಸೊ ರಬಾಡ (4-103)ನೇತೃತ್ವದ ಹರಿತವಾದ ಬೌಲಿಂಗ್ ದಾಳಿಯ ನೆರವಿನಿಂದ ಹರಿಣ ಪಡೆ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 107 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲ್ಲಿ ಕೊನೆಗೂ ಅಂಕದ ಖಾತೆ ತೆರೆದಿದೆ. ಮಾತ್ರವಲ್ಲ ಸತತ ಸೋಲಿನ ಸುಳಿಯಿಂದಲೂ ಹೊರ ಬಂದಿದೆ.

ನಾಲ್ಕನೇ ದಿನವಾದ ರವಿವಾರ ಗೆಲ್ಲಲು 376 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಟೀ ವಿರಾಮಕ್ಕೆ ಮೊದಲೇ 268 ರನ್ ಗಳಿಸಿ ಆಲೌಟಾಯಿತು. ರಬಾಡ ಇಂಗ್ಲೆಂಡ್ ಬ್ಯಾಟಿಂಗ್ ಸರದಿಯನ್ನು ಬೇಧಿಸಿದರು. ಅನ್ರಿಚ್ ನೊರ್ಟ್ಜೆ(3-56)ಹಾಗೂ ಕೇಶವ ಮಹಾರಾಜ್(2-37)ರಬಾಡಗೆ ಸಮರ್ಥ ಸಾಥ್ ನೀಡಿದರು.

ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ಮ್ಯಾಚ್ ವಿನ್ನರ್ ಬೆನ್ ಸ್ಟೋಕ್ಸ್ ವಿಕೆಟ್ ಪತನದೊಂದಿಗೆ ಪಂದ್ಯಕ್ಕೆ ತಿರುವು ಲಭಿಸಿತು. ಈ ಇಬ್ಬರು ಕ್ರೀಸ್‌ನಲ್ಲಿರುವ ತನಕ ಇಂಗ್ಲೆಂಡ್‌ನಾಟಕೀಯ ಗೆಲುವಿನ ವಿಶ್ವಾಸದಲ್ಲಿತ್ತು.

ಈ ವರ್ಷ ಆಸ್ಟ್ರೇಲಿಯ ವಿರುದ್ಧ ಹೆಡ್ಡಿಂ ಗ್ಲೆಯಲ್ಲಿ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 362 ರನ್ ಗಳಿಸಿ ಯಶಸ್ವಿ ರನ್ ಚೇಸಿಂಗ್ ಮಾಡಲು ನೆರವಾಗಿದ್ದ ಸ್ಟೋಕ್ಸ್ ಕೇವಲ 14 ರನ್ ಗಳಿಸಿ ಸ್ಪಿನ್ನರ್ ಕೇಶವ ಮಹಾರಾಜ್‌ಗೆ ಕ್ಲೀನ್‌ಬೌಲ್ಡಾದರು. ರೂಟ್ 48 ರನ್(101 ಎಸೆತ, 8 ಬೌಂಡರಿ)ಗಳಿಸಿ ಔಟಾಗುವುದರೊಂದಿಗೆ ಇಂಗ್ಲೆಂಡ್‌ನ ಗೆಲುವಿನ ಕನಸು ಕಮರಿಹೋಯಿತು. ಇಂಗ್ಲೆಂಡ್‌ನ ಕೊನೆಯ ನಾಲ್ಕು ವಿಕೆಟ್‌ಗಳು ಬೆನ್ನುಬೆನ್ನಿಗೆ ಉರುಳಿದವು. ರಬಾಡ ಹಾಗೂ ನೊರ್ಟ್ಜೆ ಇಂಗ್ಲೆಂಡ್‌ನ ಬಾಲಂಗೋಚಿಗಳನ್ನು ಬೇಗನೆ ಪೆವಿಲಿಯನ್‌ಗೆ ಕಳುಹಿಸಿದರು. ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿದ್ದ ಇಂಗ್ಲೆಂಡ್ 46 ರನ್ ಸೇರಿಸುವಷ್ಟರಲ್ಲಿ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಇದಕ್ಕೂ ಮೊದಲು ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 121 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿತು. 77 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಆರಂಭಿಕ ಆಟಗಾರ ಬರ್ನ್ಸ್ (84 ರನ್,154 ಎಸೆತ, 11 ಬೌಂಡರಿ)ನಿನ್ನೆಯ ಮೊತ್ತಕ್ಕೆ ಕೇವಲ 7 ರನ್ ಸೇರಿಸಿ ನೊರ್ಟ್ಜೆಗೆ ವಿಕೆಟ್ ಒಪ್ಪಿಸಿದರು. 10 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ್ದ ಡೆನ್ಲಿ 31 ರನ್ ಗಳಿಸಿ ಪ್ರಿಟೋರಿಯಸ್‌ಗೆ ಔಟಾದರು.

ಉಭಯ ತಂಡಗಳು ಜ.3ರಿಂದ 7ರ ತನಕ ನ್ಯೂಲ್ಯಾಂಡ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನು ಆಡಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News