ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಅಜಿತ್ ಪವಾರ್ ಉಪ ಮುಖ್ಯಮಂತ್ರಿ

Update: 2019-12-30 10:19 GMT

ಮುಂಬೈ, ಡಿ.30: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸೋಮವಾರ ತನ್ನ ಸಂಪುಟ ವಿಸ್ತರಣೆ ಮಾಡಿದ್ದು, ವಿಧಾನಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ)ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಬಿಎಸ್ ಕೊಶಿಯಾರಿ ಪ್ರಮಾಣವಚನ ಬೋಧಿಸಿದರು.

ಅಜಿತ್ ಪವಾರ್ ಎರಡು ತಿಂಗಳಲ್ಲಿ 2ನೇ ಬಾರಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ತಿಂಗಳು ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದ ಅಜಿತ್ ಪವಾರ್, ದೇವೇಂದ್ರ ಫಡ್ನವಿಸ್ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಫಡ್ನವಿಸ್ ಸರಕಾರ ಕೇವಲ 80 ಗಂಟೆ ಮಾತ್ರ ಅಧಿಕಾರದಲ್ಲಿತ್ತು.

ಶಿವಸೇನೆ ಹಾಗೂ ಎನ್‌ಸಿಪಿಯಿಂದ ತಲಾ 13 ಹಾಗೂ ಕಾಂಗ್ರೆಸ್‌ನ 10  ಸೇರಿದಂತೆ ಒಟ್ಟು 36 ಸಚಿವರು ಸಂಪುಟ ಸೇರಿದ್ದಾರೆ. ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ಮಾಜಿ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್‌ರ ಪುತ್ರ ಅಮಿತ್ ಹಾಗೂ ಹಿರಿಯ ನಾಯಕ ಏಕನಾಥ ಗಾಯಕ್ವಾಡ್ ಪುತ್ರಿ ವರ್ಷಾ ಗಾಯಕ್ವಾಡ್ ಸಹಿತ 10 ಶಾಸಕರು ಸಂಪುಟ ಸೇರಿದ್ದಾರೆ.

ಠಾಕ್ರೆ ಕುಟುಂಬದಿಂದ ಮೊದಲ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕನಾಗಿರುವ ಆದಿತ್ಯ ಠಾಕ್ರೆ ತಂದೆ ಉದ್ಧವ್ ಠಾಕ್ರೆಯ ಸಂಪುಟ ಸೇರಿ ಅಚ್ಚರಿ ಮೂಡಿಸಿದರು. 29ರ ಹರೆಯದ ಆದಿತ್ಯ ಪರಿಸರ ಅಥವಾ ಶಿಕ್ಷಣ ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ. ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳ ಬಳಿಕ ಸಂಪುಟ ವಿಸ್ತರಣೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News