ಅಪರಿಚಿತ ಆರೋಪಿಗಳು 'ಮುಸ್ಲಿಮರು' ಎಂದು ಮಂಗಳೂರು ಪೊಲೀಸರು ಎಫ್‍ಐಆರ್ ನಲ್ಲಿ ಉಲ್ಲೇಖಿಸಿದ್ದು ಹೇಗೆ?

Update: 2019-12-30 09:45 GMT

►ಪೊಲೀಸರಿಗೆ ಗಾಯ: ಕಮಿಷನರ್ ಹೇಳಿಕೆಗೂ, ವೈದ್ಯಾಧಿಕಾರಿ ಹೇಳಿಕೆಗೂ ಅಜಗಜಾಂತರ

ಮಂಗಳೂರು: ಡಿಸೆಂಬರ್ 19ರಂದು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಕುರಿತಂತೆ ಪೊಲೀಸರು ದಾಖಲಿಸಿರುವ 24 ಎಫ್‍ಐಆರ್ ಗಳ ಪೈಕಿ ಕನಿಷ್ಠ ಆರರಲ್ಲಿ ಪೊಲೀಸರು 'ಅಪರಿಚಿತ ಮುಸ್ಲಿಂ ಯುವಕರ' ಮೇಲೆ ಅಕ್ರಮ ಕೂಟ, ಹಲ್ಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ, ದೇಶದ್ರೋಹದ ಆರೋಪ ಹೊರಿಸಿದ್ದಾರೆ. ಎಫ್‍ಐಆರ್‍ನಲ್ಲಿ 2,000ಕ್ಕೂ ಅಧಿಕ ಪ್ರತಿಭಟನಾಕಾರರನ್ನು `ಅಪರಿಚಿತ' ಎಂದು ಬಣ್ಣಿಸಲಾಗಿದ್ದರೆ, ಪೊಲೀಸರು 'ಅಪರಿಚಿತರನ್ನು' ಮುಸ್ಲಿಮರೆಂದೇ ಉಲ್ಲೇಖಿಸಿದ್ದೇಕೆ ಎಂದು thewire.in ನಲ್ಲಿ ಪ್ರಕಟವಾದ ಸುಕನ್ಯಾ ಶಾಂತಾ ಅವರ ವಿಶೇಷ ವರದಿ ಪ್ರಶ್ನಿಸಿದೆ.

ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕುರಿತಂತೆ ದಾಖಲಾಗಿರುವ 24 ಎಫ್‍ಐಆರ್‍ ಗಳ ಪೈಕಿ  15 ಎಫ್‍ಐಆರ್‍ ಗಳ ಕುರಿತು ಮಾಹಿತಿ ಸಂಗ್ರಹಿಸಿರುವ thewire.in ಅವುಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಪೊಲೀಸರು ಸಂಪೂರ್ಣವಾಗಿ ತಾರತಮ್ಯ ನಿಲುವು ತಳೆದಿರುವುದು ಬಯಲಾಗಿದೆ. ಆರೋಪಗಳನ್ನು `ಅಪರಿಚಿತರ' ಮೇಲೆ ಹೊರಿಸಿದ್ದರೂ ಅವರು `ಮುಸ್ಲಿಂ ವ್ಯಕ್ತಿಗಳು,' ಎಂದು ಪೊಲೀಸರು ಉಲ್ಲೇಖಿಸಿದ್ದಾರೆ.

ಝೀನತ್ ಬಕ್ಷ್ ಜುಮಾ ಮಸೀದಿ ಸಮೀಪದ ಮದ್ದುಗುಂಡು ಅಂಗಡಿಯ ಮಾಲಕ ಎಂ ಮನೋಹರ್ ಕಿಣಿ ಅವರು ಮಂಗಳೂರು ಉತ್ತರ ಠಾಣೆಯಲ್ಲಿ ತಮ್ಮ ದೂರಿನಲ್ಲಿ  `ಮುಸ್ಲಿಂ ಯುವಕರ ಗುಂಪು' ಅಂಗಡಿಗೆ ದಾಳಿ ನಡೆಸಿ  1 ಲಕ್ಷ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯುಂಟು ಮಾಡಿದೆ ಎಂದು ಆರೋಪಿಸಿದ್ದಾರೆ. "ಅಂಗಡಿ ಮುಚ್ಚಿದ್ದ ಸಮಯ ದಾಳಿ ನಡೆದಿದೆ. ಡಿಸೆಂಬರ್ 21ರಂದು ಅಂಗಡಿಗೆ ಬಂದಾಗ ತಿಳಿದು ಬಂದು ದೂರು ದಾಖಲಿಸಿದ್ದಾಗಿ ದೂರಿನಲ್ಲಿ ಹೇಳಿದ್ದಾರೆ. ಈ ಕುರಿತು  thewire.in ಅವರನ್ನು ಸಂಪರ್ಕಿಸಿದಾಗ "ಘಟನೆ ನಡೆದಾಗ ನಾನಿಲ್ಲದೆ ಇದ್ದರೂ ಘಟನೆಗೆ ಮುಸ್ಲಿಮರೇ ಕಾರಣ ಎಂದು ಖಚಿತವಾಗಿ ಹೇಳಬಹುದು" ಎಂದಿದ್ದಾರೆ.

ಅದೇ ಠಾಣೆಯಲ್ಲಿ ದಾಖಲಾದ ಇನ್ನೊಂದು ಎಫ್‍ಐಆರ್‍ನಲ್ಲಿ ರವೀಂದ್ರ ನಿಕ್ಕಮ್ ಎಂಬವರು ತಮ್ಮ ಸಂಬಂಧಿಯ ಚಿನ್ನದಂಗಡಿ, ಭವಂತಿ ಸ್ಟ್ರೀಟ್‍ನಲ್ಲಿನ ರಾಜಲಕ್ಷ್ಮಿ ಜುವೆಲ್ಲರ್ಸ್ ಮೇಲೆ `50ರಿಂದ 60' ಮುಸ್ಲಿಂ ಯುವಕರ  ತಂಡ ದಾಳಿ ನಡೆಸಿತ್ತು ಹಾಗೂ ಹತ್ತಿರದಲ್ಲಿಯೇ ಇರುವ ತಮ್ಮ ಮಹಾಲಕ್ಷ್ಮಿ ಜುವೆಲರ್ಸ್ ಸಂಸ್ಥೆಯತ್ತಲೂ ಮುನ್ನುಗ್ಗಿತ್ತೆಂದು ಆರೋಪಿಸಿದ್ದರು.

thewire.in ಪ್ರತಿನಿಧಿ ಅವರನ್ನು ಸಂಪರ್ಕಿಸಿ ಆರೋಪಿಗಳು `ಮುಸ್ಲಿಂ' ಸಮುದಾಯವರೇ ಎಂಬುದನ್ನು ಹೇಗೆ ಖಚಿತವಾಗಿ ಹೇಳಬಹುದು ಎಂದು ಪ್ರಶ್ನಿಸಿದಾಗ "ಅವರು ವರ್ತಿಸುತ್ತಿದ್ದ ರೀತಿ'' ಎಂದರೆ ನಂತರ  "ಅವರಲ್ಲಿ ಕೆಲವರು ಬ್ಯಾರಿ ಭಾಷೆ ಮಾತನಾಡುತ್ತಿದ್ದರು ಹಾಗೂ ತಮ್ಮ ಪ್ಯಾಂಟುಗಳನ್ನು ಮುಸ್ಲಿಮರು ಕೆಳಗಡೆ ಮಡಚುವ ರೀತಿಯಲ್ಲಿ ಮಡಚಿದ್ದರು'' ಎಂದಿದ್ದರು. ಇದೇ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ಎನ್ ಮಹೇಶ್ ಅವರು ದಾಖಲಿಸಿದ್ದ ದೂರಿನಲ್ಲಿ ಡಿಸೆಂಬರ್ 19ರಂದು ಸಂಜೆ "1500ರಿಂದ 2000ರಷ್ಟಿದ್ದ ಮುಸ್ಲಿಂ ವ್ಯಕ್ತಿಗಳು'' ತಮ್ಮ ವಾಹನವನ್ನು ಸುತ್ತುವರಿದು ದಾಳಿ ನಡೆಸಿದ್ದರೆಂದು ಆರೋಪಿಸಿದ್ದಾರೆ. ಆದರೆ ದೂರುದಾರರು  thewire.in ಸಂಪರ್ಕಿಸಿದಾಗ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

ಈ ಕುರಿತು  thewire.in ಮಂಗಳೂರು ಪೊಲಿಸ್ ಆಯುಕ್ತ ಹರ್ಷ ಅವರನ್ನು ಸಂಪರ್ಕಿಸಿದಾಗ ``ಪ್ರತಿಭಟನೆಗೆ ಮುಸ್ಲಿಂ ಸಂಘಟನೆ ಕರೆ ನೀಡಿದ್ದರಿಂದ ಇದೇ ಆಧಾರದಲ್ಲಿ ದೂರುದಾರರು ತಮ್ಮ ದೂರಿನಲ್ಲಿ ಹೇಳಿರಬಹುದು'' ಎಂದು ಪ್ರತಿಕ್ರಿಯಿಸಿದರಲ್ಲದೆ, ಪೊಲೀಸ್ ಇಲಾಖೆ ಯಾವುದೇ ಧರ್ಮಾಧರಿತ ತಾರತಮ್ಯ ನಡೆಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದೇ ವೇಳೆ ಜಿಲ್ಲಾ ವೈದ್ಯಾಧಿಕಾರಿ, ವೆನ್ಲಾಕ್ ಆಸ್ಪತ್ರೆಯ ಸೂಪರಿಟೆಂಡೆಂಟ್ ಆಗಿರುವ ಡಾ.ರಾಜೇಶ್ವರಿ ದೇವಿಯವರು, ಆಸ್ಪತ್ರೆಯಲ್ಲಿ 66 ಪೊಲೀಸ್ ಸಿಬ್ಬಂದಿಗೆ ಚಿಕಿತ್ಸೆ ನೀಡಲಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿರಲಿಲ್ಲ ಎಂದಿದ್ದಾರೆ. ಆದರೆ ಕಮಿಷನರ್ ಹರ್ಷ ಅವರು ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದು, 33 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದಿದ್ದಾರೆ. "33 ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಹಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊರರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ" ಎಂದವರು thewire.inಗೆ ತಿಳಿಸಿದ್ದಾರೆ.

"ಯಾವುದೇ ಗಂಭೀರ ಗಾಯಗಳಿಲ್ಲದ ಕಾರಣ ಪೊಲೀಸ್ ಸಿಬ್ಬಂದಿಯನ್ನು ಶೀಘ್ರ ಡಿಸ್ ಚಾರ್ಜ್ ಮಾಡಲಾಗಿದೆ. 66 ಪೊಲೀಸರಲ್ಲಿ 64 ಮಂದಿಯನ್ನು ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಡಿಸ್ ಚಾರ್ಜ್ ಮಾಡಲಾಗಿದೆ" ರಾಜೇಶ್ವರಿ ದೇವಿ ಪ್ರತಿಕ್ರಿಯಿಸಿರುವುದಾಗಿ ವರದಿ thewire.in ಮಾಡಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News