'ಸಶಸ್ತ್ರ ಸೇನಾಪಡೆಗಳ ಮುಖ್ಯಸ್ಥ'ರಾಗಿ ಜನರಲ್ ಬಿಪಿನ್ ರಾವತ್ ನೇಮಕ

Update: 2019-12-30 17:20 GMT

ಹೊಸದಿಲ್ಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಪ್ರಪ್ರಥಮ 'ಸಶಸ್ತ್ರ ಸೇನಾಪಡೆಗಳ ಮುಖ್ಯಸ್ಥ'ರನ್ನಾಗಿ ನೇಮಿಸಲಾಗಿದೆ.

ಮೂರು ವರ್ಷ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಬಿಪಿನ್ ರಾವತ್ ನಿವೃತ್ತರಾಗಲು ಇನ್ನೇನು ಒಂದೇ ದಿನವಿದೆ ಎನ್ನುವಾಗ ಅವರನ್ನು 'ಸಶಸ್ತ್ರ ಸೇನಾಪಡೆಗಳ ಮುಖ್ಯಸ್ಥ ಹುದ್ದೆಗೆ ಹೆಸರಿಸಲಾಗಿದೆ.

ಈ ಹುದ್ದೆಗೆ ಏರಲಿರುವ ಪ್ರಥಮ ಅಧಿಕಾರಿಯಾಗಲಿದ್ದಾರೆ ಜನರಲ್ ರಾವತ್. ಶಿಮ್ಲಾದ ಸೈಂಟ್ ಎಡ್ವರ್ಡ್ ಸ್ಕೂಲ್, ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡಮಿ ಹಾಗೂ ಡೆಹ್ರಾಡೂನ್‍ ನ ಇಂಡಿಯನ್ ಮಿಲಿಟರಿ ಅಕಾಡಮಿಯ ಹಳೆವಿದ್ಯಾರ್ಥಿಯಾಗಿರುವ ಜನರಲ್ ಬಿಪಿನ್ ರಾವತ್ ಗೋರ್ಖಾ ರೆಜಿಮೆಂಟ್‍ನವರು. ಅವರನ್ನು ಸೇನಾ ಮುಖ್ಯಸ್ಥರಾಗಿ ಡಿಸೆಂಬರ್ 31, 2016ರಂದು ನೇಮಿಸಲಾಗಿತ್ತು.

ತನ್ನ ನೂತನ ಹುದ್ದೆಯಲ್ಲಿ ರಾವತ್ ಅವರು ಯಾವುದೇ ಮಿಲಿಟರಿ ಆದೇಶವನ್ನು ಹೊರಡಿಸುವುದಿಲ್ಲ. ಆದರೆ ಮೂರೂ ಸಶಸ್ತ್ರ ಪಡೆಗಳ ಕಾರ್ಯಾಚರಣೆ, ಸಾರಿಗೆ, ತರಬೇತಿ, ಬೆಂಬಲ ಸೇವೆಗಳು, ಸಂವಹನಗಳು, ಲಾಜಿಸ್ಟಿಕ್ಸ್, ದುರಸ್ತಿ ಮತ್ತು ನಿರ್ವಹಣೆಗಳಲ್ಲಿ ಸಮನ್ವಯವನ್ನು ಸಾಧಿಸುವ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ.

ಎಲ್ಲ ಮೂರೂ ಸಶಸ್ತ್ರಪಡೆಗಳ ವಿಷಯಗಳಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಪ್ರಧಾನ ಮಿಲಿಟರಿ ಸಲಹೆಗಾರರಾಗಿಯೂ ರಾವತ್ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಸಶಸ್ತ್ರ ಪಡೆಗಳ ಮುಖ್ಯಸ್ಥರ ಸಮಿತಿಯ ಕಾಯಂ ಅಧ್ಯಕ್ಷರೂ ಆಗಿರಲಿದ್ದಾರೆ. ಈ ಹುದ್ದೆಯನ್ನು ಅತ್ಯಂತ ಹಿರಿಯ ಸಶಸ್ತ್ರ ಪಡೆ ಮುಖ್ಯಸ್ಥರು ಸರದಿಯಲ್ಲಿ ನಿರ್ವಹಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News