ಹಿಂಸೆ, ದ್ವೇಷ ಸಾಧನೆಗೆ ಭಾರತದಲ್ಲಿ ಜಾಗವಿಲ್ಲ: ಆದಿತ್ಯನಾಥ್ ಗೆ ಪ್ರಿಯಾಂಕಾ ತಿರುಗೇಟು
ಹೊಸದಿಲ್ಲಿ, ಡಿ.30: ಭಾರತದಲ್ಲಿ ವೈರತ್ವ, ಹಿಂಸಾಚಾರ ಮತ್ತು ದ್ವೇಷಸಾಧನೆಗೆ ಜಾಗವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಇದಿರೇಟು ನೀಡಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ತಮ್ಮ ಸರಕಾರ ಪ್ರತೀಕಾರ ತೀರಿಸಿಕೊಳ್ಳಲಿದೆ ಎಂಬ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕಾ ಗಾಂಧಿ, ಉತ್ತರಪ್ರದೇಶದ ಮುಖ್ಯಮಂತ್ರಿ ಹಾಗೂ ಅಲ್ಲಿನ ಪೊಲೀಸರು ಇಬ್ಬರೂ ತಪ್ಪು ಕಾರ್ಯ ಮಾಡುವುದರಲ್ಲಿ ಸಹಭಾಗಿಗಳಾಗಿದ್ದಾರೆ ಎಂದರು.
ದಿಲ್ಲಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, “ನನ್ನ ಸುರಕ್ಷತೆ ದೊಡ್ಡ ವಿಷಯವೇನಲ್ಲ. ಸುರಕ್ಷತೆಗೆ ಭದ್ರತೆಯ ಅಗತ್ಯವೂ ಇಲ್ಲ. ನಾವೀಗ ಮಾತನಾಡುತ್ತಿರುವುದು ಜನಸಾಮಾನ್ಯರ, ನಾಗರಿಕರ ಸುರಕ್ಷತೆಯ ಬಗ್ಗೆ. 5,500ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು ಅವರನ್ನು ಥಳಿಸಲಾಗುತ್ತಿದೆ. ಈ ತಪ್ಪು ಕಾರ್ಯದಲ್ಲಿ ಪೊಲೀಸರು ಮತ್ತು ಆಡಳಿತ ಇಬ್ಬರೂ ಸಹಭಾಗಿಗಳಾಗಿದ್ದಾರೆ” ಎಂದರು.
ಯೋಗೀಜಿ(ಆದಿತ್ಯನಾಥ್) ಕೇಸರಿ ಬಟ್ಟೆಯನ್ನು ಧರಿಸುತ್ತಾರೆ. ಇದು ಈ ದೇಶದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚೇತನಕ್ಕೆ ಸಂಬಂಧಿಸಿದ ಬಣ್ಣವಾಗಿದೆ. ಇದು ಹಿಂದು ಧರ್ಮದ ಸಂಕೇತವಾಗಿದೆ. ಅವರು ಆ ಧರ್ಮವನ್ನು ಅನುಸರಿಸಬೇಕು. ಆ ಧರ್ಮದಲ್ಲಿ ವೈರತ್ವ, ಪ್ರತೀಕಾರ ಮತ್ತು ಹಿಂಸೆಗೆ ಜಾಗವಿಲ್ಲ ಎಂದು ಪ್ರಿಯಾಂಕಾ ಹೇಳಿದರು.
ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಇಬ್ಬರು ಮೃತಪಟ್ಟಿರುವ ಬಿಜ್ನೂರ್‌ಗೆ ತೆರಳಿ ಅಲ್ಲಿ ಮೃತರ ಕುಟುಂಬದವರನ್ನು ಭೇಟಿಯಾಗಿದ್ದೇನೆ. ಇಬ್ಬರೂ ಯುವಕರು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ಅಮಾಯಕರು. ಒಬ್ಬ ಕಾಫಿ ಮಾರುವ ಹುಡುಗ, ಮತ್ತೊಬ್ಬ ಯುವಕ, 20 ವರ್ಷದ ಸುಲೈಮಾನ್ ಐಎಎಸ್ ಕಲಿಯಬೇಕೆಂಬ ಆಕಾಂಕ್ಷೆ ಹೊಂದಿದ್ದ. ಈತ ನಮಾಝ್ ಮಾಡಲು ಹೋಗಿದ್ದಾಗ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಅಂಬೇಡ್ಕರ್‌ರ ತತ್ವದ ಅನುಯಾಯಿಯಾಗಿರುವ ಐಪಿಎಸ್ ಅಧಿಕಾರಿಯನ್ನು ಅವರ ಮನೆಯಿಂದಲೇ ಬಂಧಿಸಲಾಗಿದೆ. ರಾಜ್ಯದಲ್ಲಿ ಬಂಧಿತರಾದವರಲ್ಲಿ ಸುಮಾರು 1,100ಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿರದ ಅಮಾಯಕರು ಎಂಬುದನ್ನು ಸರಕಾರದ ಹೇಳಿಕೆಯೇ ತಿಳಿಸುತ್ತದೆ ಎಂದು ಪ್ರಿಯಾಂಕಾ ಆರೋಪಿಸಿದರು.
ಪ್ರಿಯಾಂಕಾ ಗಾಂಧಿ ಹೇಳಿಕೆಯನ್ನು ಖಂಡಿಸಿರುವ ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ಆದಿತ್ಯನಾಥ್ ಸಂಪ್ರದಾಯಸ್ಥ ಹಿಂದೂ ಕುಟುಂಬದವರು. ಕೇಸರಿ ಬಣ್ಣದ ಬಗ್ಗೆ ಕಾಂಗ್ರೆಸ್‌ಗೆ ಏನೂ ತಿಳಿದಿಲ್ಲ ಎಂಬುದು ಅವರ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ. ಕೇಸರಿ ಹಿಂಸಾಚಾರದ ಸಂಕೇತವಲ್ಲ. ಕಾಂಗ್ರೆಸ್‌ನವರು ವೋಟ್ ಬ್ಯಾಂಕಿನ ಬಗ್ಗೆ ಗಮನವಿಟ್ಟು ಈಗ ಸಾರ್ವಜನಿಕ ಆಸ್ತಿಯನ್ನು ಹಾನಿ ಮಾಡಿದವರ ರಕ್ಷಣೆಗೆ ನಿಂತಿದ್ದಾರೆ ಎಂದು ಟೀಕಿಸಿದ್ದಾರೆ.
ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹ
ಈ ಮಧ್ಯೆ, ಉತ್ತರಪ್ರದೇಶ ಪೊಲೀಸರ ಕಾನೂನುಬಾಹಿರ ನಡವಳಿಕೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಮತ್ತು ಉತ್ತರಪ್ರದೇಶ ಸರಕಾರ ಹಾಗೂ ಪೊಲೀಸರ ಹಿಂಸಾತ್ಮಕ ಮತ್ತು ಕ್ರಿಮಿನಲ್ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಉ.ಪ್ರದೇಶದ ರಾಜ್ಯಪಾಲರಿಗೆ ಪತ್ರ ಬರೆದಿರುವುದಾಗಿ ಕಾಂಗ್ರೆಸ್ ಪಕ್ಷ ತಿಳಿಸಿದೆ.