ಪೊಲೀಸ್ ಪೇದೆಗೆ ಹಲ್ಲೆ ನಡೆಸಿ, ಮೂತ್ರ ಕುಡಿಸಲು ಒತ್ತಾಯಿಸಿದ ಆರೋಪ: ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲು
ಪಿಲಿಭಿತ್, ಡಿ.31: ಉತ್ತರ ಪ್ರದೇಶದ ಪೊಲೀಸ್ ಕಾನ್ಸ್ ಟೇಬಲ್ ಒಬ್ಬರಿಗೆ ಹಲ್ಲೆ ನಡೆಸಿ , ಚಿನ್ನಾಭರಣ ದೋಚಿ ಅವರಿಗೆ ಮೂತ್ರ ಕುಡಿಸಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿ ಬಿಜೆಪಿ ಶಾಸಕ ಕಿಶನ್ ಲಾಲ್ ರಾಜ್‌ಪೂತ್, ಅವರ ಸೋದರಳಿಯ ರಿಷಭ್ ಸೇರಿದಂತೆ 35 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಜೆಪಿ ಶಾಸಕ ಕಿಶನ್ ಲಾಲ್ ರಾಜ್‌ಪೂತ್ ಹಾಗೂ ಅವರ ಬೆಂಬಲಿಗರು ಪೊಲೀಸ್ ಕಾನ್ಸ್ ಟೇಬಲ್ ಮೋಹಿತ್ ಗುರ್ಜರ್ ಎಂಬವರ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ ನಗ-ನಗದನ್ನು ದೋಚಿದರೆಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಕಾನ್‌ಸ್ಟೆಬಲ್ ಮೋಹಿತ್ ಗುರ್ಜಾರ್ ಅವರು 50,000 ರೂ.ಗೆ ಬೈಕು ಖರೀದಿಸಿದ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದರು. ಆದರೆ ಮಾರಾಟ ಮಾಡಿರುವ ರಾಹುಲ್ ಅವರು ಸರಿಯಾದ ನೋಂದಣಿ ದಾಖಲೆಗಳನ್ನು ಹೊಂದಿಲ್ಲ ಎಂದು ಆರೋಪಿಸಲಾಗಿದೆ ಮತ್ತು ಹೀಗಾಗಿ ಅವರು ಗುರ್ಜರ್ ಹೆಸರಿಗೆ ಬೈಕ್ ಗೆ ದಾಖಲೆ ಪತ್ರಗಳನ್ನು ವರ್ಗಾವಣೆ ಮಾಡಲು ವಿಫಲರಾಗಿದ್ದಾರೆ ಎನ್ನಲಾಗಿದೆ
ಈ ಕಾರಣದಿಂದಾಗಿ ಗುರ್ಜರ್ ಅವರು ಸೆಪ್ಟೆಂಬರ್ 12 ರಂದು ತಾನು ನೀಡಿದ್ದ ಹಣವನ್ನು ವಾಪಸ್ ಪಡೆದಾಗ ರಾಹುಲ್ ಅವರನ್ನು ಪಿಲಿಭಿತ್ ಮಂಡಿ ಸಮಿತಿ ಗೇಟ್ ಬಳಿ ಕರೆದರೆನ್ನಲಾಗಿದೆ. ಅಲ್ಲಿಗೆ ಗುರ್ಜರ್ ತಲುಪುತ್ತಿದ್ದಂತೆ ಕಿಶನ್ ಲಾಲ್ ರಾಜ್‌ಪೂತ್ ಅವರ ಸೋದರಳಿಯ ರಿಷಭ್ ಮತ್ತು ರಾಹುಲ್ ಗುಂಪು ಅವರನ್ನು ನಿಂದಿಸಿ ಹಲ್ಲೆ ನಡೆಸಿತೆನ್ನಲಾಗಿದೆ. ಗುಂಡು ಹಾರಿಸಿ ತನ್ನನ್ನು ಕೊಲ್ಲಲು ಯತ್ನಿಸಿದರು ಆದರೆ ನಾನು ತಪ್ಪಿಸಿಕೊಂಡಿದ್ದೇನೆ. ಅವರು ತನ್ನ ಕೈಯಲಿದ್ದ ಚಿನ್ನದ ಸರ ಮತ್ತು ಪರ್ಸನ್ನು ಕಿತ್ತುಕೊಂಡರು . ಮೂತ್ರ ಕುಡಿಯುವಂತೆ ಒತ್ತಾಯಿಸಿದರು ಎಂದು ಪೊಲೀಸ್ ಕಾನ್ಸ್ ಟೇಬಲ್ ಮೋಹಿತ್ ಗುರ್ಜರ್ ಆರೋಪಿಸಿದ್ದಾರೆ,
ಘಟನೆ ನಡೆದಾಗ ಪೊಲೀಸ್ ಅಧಿಕಾರಿಗಳು ಅಲ್ಲಿದ್ದರೂ, ಅವರು ಮೌನ ಪ್ರೇಕ್ಷಕರಾಗಿದ್ದರು ಎಂದು ಗುರ್ಜರ್ ಆರೋಪಿಸಿದರು. ಈ ಬಗ್ಗೆ ಸುಂಗಾರ್ಹಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಸಲಾಗಿದೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಶಾಸಕ ಮತ್ತು ಅವರ ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದ ನಂತರ ಪೊಲೀಸರು ಪೊಲೀಸರು ಕ್ರಮ ಕೈಗೊಂಡಿದ್ದಾರೆ ಎಂದು ಕಾನ್‌ಸ್ಟೆಬಲ್ ಹೇಳಿದ್ದಾರೆ.
ರಜಪೂತ್, ಅವರ ಸೋದರಳಿಯ ರಿಷಭ್, ರಾಹುಲ್, ಮತ್ತು 35 ಕ್ಕೂ ಅಧಿಕ ಮಂದಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 397 ಮತ್ತು 395 ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.