ಜಾಧವ್‌ಪುರ ವಿವಿ ಮಹಿಳಾ ಪ್ರೊಫೆಸರ್ ಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ: ಆರೋಪ

Update: 2019-12-31 14:44 GMT

ಕೋಲ್ಕತಾ, ಡಿ.31: ಜಾದವ್‌ಪುರ ವಿವಿ ಹಾಗೂ ನಿರ್ದಿಷ್ಟ ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ವಿರೋಧಿಸಿದ್ದಕ್ಕೆ ತನ್ನ ಮೇಲೆ ಬಿಜೆಪಿ ಮಹಿಳಾ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ವಿವಿಯ ಪ್ರೊಫೆಸರ್ ದೊಯೀತಾ ಮಜೂಮ್ದಾರ್ ಎಂಬವರು ಆರೋಪಿಸಿದ್ದಾರೆ.

ಪೌರತ್ವ ಕಾಯ್ದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ 8ಬಿ ವಿಭಾಗದಲ್ಲಿ ಬಿಜೆಪಿ ಬೆಂಬಲಿಗ ಗುಂಪು ನಡೆಸುತ್ತಿದ್ದ ಸಭೆಯನ್ನು ಗಮನಿಸಿ ಅಲ್ಲಿಗೆ ಹೋದೆ. ಸಭೆಯಲ್ಲಿ ಮಾತನಾಡುತ್ತಿದ್ದ ಬಿಜೆಪಿ ಕಾರ್ಯಕರ್ತನೊಬ್ಬ ಒಂದು ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದ. ಬಳಿಕ ವಿವಿಯತ್ತ ಬೆರಳು ತೋರಿಸಿ ‘ಈ ಎಲ್ಲಾ ದುಷ್ಕಾರ್ಯಗಳಿಗೆ ಈ ವಿವಿಯೇ ಮೂಲ ಆಧಾರವಾಗಿದೆ. ಇಲ್ಲಿ ದಿನಾ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗುತ್ತಿದ್ದಾರೆ ಎಂದು ಹೇಳಿದ. ಆಗ ನಾನು ‘ಸುಳ್ಳು, ಸುಳ್ಳು’ ಎಂದು ಜೋರಾಗಿ ಕಿರುಚಿದೆ ಎಂದು ದೊಯೀತಾ ಹೇಳಿದ್ದಾರೆ.

 ಅಷ್ಟರಲ್ಲಿ ಅಲ್ಲಿದ್ದ ಮಹಿಳಾ ಕಾರ್ಯಕರ್ತೆಯರು ತನ್ನನ್ನು ಸುತ್ತುವರಿದು ಹಲ್ಲೆಗೆ ಮುಂದಾದರು. ಈ ಸಂದರ್ಭ ರಕ್ಷಣೆಗೆ ಬಂದ ಓರ್ವ ಯುವಕನನ್ನು ಅಲ್ಲಿಂದ ಹೊರಗೆ ತಳ್ಳಲಾಯಿತು. ಬಳಿಕ ಇಬ್ಬರು ವ್ಯಕ್ತಿಗಳು ಕಾಲಿನಿಂದ ಒದೆಯುತ್ತಾ ಹೊರಗೆ ಎಳೆದು ಹಾಕಿದರು ಎಂದು ದೊಯೀತಾ ಮಜೂಮ್ದಾರ್ ಆರೋಪಿಸಿದ್ದಾರೆ.

ತನಗೆ ನೆರವಾಗಲು ಯತ್ನಿಸಿದ ಇಬ್ಬರು ವಿದ್ಯಾರ್ಥಿಗಳನ್ನೂ ಥಳಿಸಲಾಗಿದ್ದು ಈ ಬಗ್ಗೆ ಪೊಲೀಸರಲ್ಲಿ ದೂರು ನೀಡಿರುವುದಾಗಿ ಅವರು ಹೇಳಿದ್ದಾರೆ. ಈ ಆರೋಪವನ್ನು ಬಿಜೆಪಿ ಮೂಲಗಳು ನಿರಾಕರಿಸಿವೆ. ವಿವಿಯ ಕ್ಯಾಂಪಸ್‌ನ ಹೊರಗಡೆ ಪಕ್ಷದ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್‌ಗುಪ್ತ, ಸಂಸದ ಸಂತನು ಠಾಕೂರ್, ಹಿರಿಯ ಬಿಜೆಪಿ ಮುಖಂಡ ಶಮಿಕ್ ಭಟ್ಟಾಚಾರ್ಯ ಮುಂತಾದ ಮುಖಂಡರ ಉಪಸ್ಥಿತಿಯಲ್ಲಿ ನಡೆಯುತ್ತಿದ್ದ ಬಿಜೆಪಿ ಸಭೆ ಸಂದರ್ಭ ಅಲ್ಲಿಗೆ ಬಂದ ಎಡಪಕ್ಷಗಳ ಬೆಂಬಲಿಗರು ಘೋಷಣೆ ಕೂಗಿ ಬಿಜೆಪಿ ಕಾರ್ಯಕರ್ತರ ಮೇಲೆ ಕೈಮಾಡಲು ಮುಂದಾದರು. ಆದರೂ ಪಕ್ಷದ ಕಾರ್ಯಕರ್ತರು ಸಂಯಮ ವಹಿಸಿದ್ದು ಯಾರ ಮೇಲೂ ಹಲ್ಲೆ ನಡೆಸಿಲ್ಲ ಎಂದು ರಾಜ್ಯ ಬಿಜೆಪಿ ಮುಖಂಡರು ಹೇಳಿದ್ದಾರೆ.

ವಿವಿಯ ಆವರಣದಲ್ಲಿ ಎರಡು ಗುಂಪುಗಳ ಮಧ್ಯೆ ವಾಗ್ವಾದ ಆರಂಭವಾಗಿದ್ದು, ತಕ್ಷಣ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಬಿಜೆಪಿ ಕಾರ್ಯಕರ್ತರು ಪ್ರೊಫೆಸರ್ ಡೊಯೀತಾ ಮಜೂಮ್ದಾರ್ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ ಎಂದು ಜಾಧವ್‌ಪುರ ವಿವಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪಾರ್ಥ ರಾಯ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News