Breaking News: ಹೊಸವರ್ಷಕ್ಕೆ ರೈಲು ಪ್ರಯಾಣ ದರ ಹೆಚ್ಚಳ

Update: 2019-12-31 18:41 GMT

ಹೊಸದಿಲ್ಲಿ, ಡಿ.31: ರೈಲ್ವೇ ಪ್ರಯಾಣ ದರವನ್ನು ಹೆಚ್ಚಿಸಲಾಗಿದ್ದು, ಡಿಸೆಂಬರ್ 31ರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿರುವುದಾಗಿ ರೈಲ್ವೇ ಸಚಿವಾಲಯ ತಿಳಿಸಿದೆ. ಪ್ರಯಾಣಿಕರ ಟಿಕೆಟ್ ದರದ ಮೂಲ ಶುಲ್ಕದಲ್ಲಿ ಹೆಚ್ಚಳ ಮಾಡಲಾಗಿದ್ದು, ಜನವರಿ 1, 2020ರಿಂದ ಇದು ಜಾರಿಗೆ ಬರಲಿದೆ ಎಂದು ಮಂಗಳವಾರ ಸಂಜೆ ಹೊರಡಿಸಲಾದ ಆದೇಶದಲ್ಲಿ ತಿಳಿಸಲಾಗಿದೆ.

ಎಸಿ ರಹಿತ ಸಾಮಾನ್ಯ ರೈಲುಗಳಲ್ಲಿ ಪ್ರತೀ ಕಿ.ಮೀಗೆ 1 ಪೈಸೆಯಂತೆ ದರ ಹೆಚ್ಚಿಸಲಾಗಿದ್ದರೆ, ಮೈಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಎಸಿರಹಿತ ಬೋಗಿಗಳಿಗೆ ಪ್ರತೀ ಕಿ.ಮೀಗೆ 2 ಪೈಸೆಯಂತೆ, ಎಸಿ ಇರುವ ಬೋಗಿಗಳಿಗೆ ಪ್ರತೀ ಕಿ.ಮೀಗೆ 4 ಪೈಸೆಯಂತೆ ದರ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

 ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ್ದ ರೈಲ್ವೇ ಮಂಡಳಿ ಅಧ್ಯಕ್ಷ ವಿನೋದ್ ಕುಮಾರ್ ಯಾದವ್, ರೈಲ್ವೇ ದರ ಹೆಚ್ಚಿಸುವ ಬಗ್ಗೆ ಕೇಂದ್ರ ಸರಕಾರ ನಿರ್ಧರಿಸಿಲ್ಲ ಎಂದಿದ್ದರು. ಪರಿಷ್ಕೃತ ದರ ಜಾರಿಗೂ ಮುನ್ನ ನೀಡಲಾಗಿರುವ ಟಿಕೆಟ್‌ಗಳಿಗೆ ಹೊಸ ದರ ಅನ್ವಯಿಸುವುದಿಲ್ಲ. ಆದರೆ ನಿಲ್ದಾಣದಲ್ಲಿ ಅಥವಾ ಟಿಕೆಟ್ ಪರೀಕ್ಷಕರು ನೀಡುವ ಹೊಸ ಟಿಕೆಟ್ ನೂತನ ದರವನ್ನು ಹೊಂದಿರಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

2014-15ರ ಬಳಿಕ ರೈಲ್ವೇ ಪ್ರಯಾಣ ದರವನ್ನು ಹೆಚ್ಚಿಸಿಲ್ಲ. ಆದರೆ ಈ ಅವಧಿಯಲ್ಲಿ ರೈಲು ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗಿದೆ. ಭಾರತೀಯ ರೈಲ್ವೇಯು ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಸೌಲಭ್ಯ ಒದಗಿಸುವ ಜೊತೆಗೆ ರೈಲು ಬೋಗಿಗಳನ್ನು ಆಧುನೀಕರಣಗೊಳಿಸುವ ಮೂಲಕ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ವ್ಯವಸ್ಥೆ ಕಲ್ಪಿಸಲಿದೆ ಎಂದು ರೈಲ್ವೇ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News