ಪ್ರಜ್ಞಾ ಸಿಂಗ್ ಬಾಯಿ ತೆರೆದರೆ ವಿಷ ಕಕ್ಕುತ್ತಾರೆ: ಭೂಪೇಶ್ ಬಾಘೇಲ್

Update: 2019-12-31 16:54 GMT

ರಾಯ್‌ಪುರ, ಡಿ. 31: ಭೋಪಾಲದ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ವಿರುದ್ಧ ಹೇಳಿಕೆ ನೀಡುವ ಮೂಲಕ ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ವಿವಾದಕ್ಕೆ ಒಳಗಾಗಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘‘ನಾನು ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಸಾಧ್ವಿ ಎಂದು ಪರಿಗಣಿಸುವುದಿಲ್ಲ. ಪ್ರಜ್ಞಾ ಸಿಂಗ್ ಠಾಕೂರ್ ಬಾಯಿ ತೆರೆದಾಗಲೆಲ್ಲ ವಿಷ ಕಕ್ಕುತ್ತಾರೆ. ಇದು ನಿಜವಾದ ಸಾಧ್ವಿಯ ವ್ಯಕ್ತಿತ್ವ ಅಲ್ಲ’’ ಎಂದು ಹೇಳಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ನೀಡಿದ್ದ ‘ಕೇಸರಿ’ ಹೇಳಿಕೆ ಕುರಿತು ಬೆಂಬಲ ವ್ಯಕ್ತಪಡಿಸಿದ ಭೂಪೇಶ್ ಬಾಘೇಲ್, ಆದಿತ್ಯನಾಥ್ ಕೇಸರಿ ಧರಿಸಿದ್ದಾರೆ. ಆದರೆ, ಅವರು ಜಗತ್ತನ್ನು ತ್ಯಜಿಸಿಲ್ಲ. ಬದಲಾಗಿ ಅವರು ಕುರ್ಚಿಗೆ ಅಂಟಿಕೊಂಡಿದ್ದಾರೆ. ನಿಜವಾದ ಸಂತರು ಸರ್ವಸಂಗ ತ್ಯಾಗದ ಸಂಕೇತವಾಗಿ ಕೇಸರಿಯನ್ನು ಸ್ವೀಕರಿಸುತ್ತಾರೆ. ಉತ್ತರಪ್ರದೇಶದಲ್ಲಿ ಜಾತಿ ವಿಭಜನೆ ಎದ್ದು ಕಾಣುತ್ತಿದೆ. ಇದನ್ನು ಆದಿತ್ಯನಾಥ್ ಉತ್ತೇಜಿಸುತ್ತಿದ್ದಾರೆ ಎಂದರು.

 ಒಬ್ಬ ಸನ್ಯಾಸಿ ಮಾಡುವ ಜನಪರ ಕಾರ್ಯದಲ್ಲಿ ಯಾರು ಅಡೆತಡೆ ಉಂಟು ಮಾಡುತ್ತಾರೋ ಅವರು ಶಿಕ್ಷೆ ಅನುಭವಿಸುತ್ತಾರೆ. ಪರಂಪರೆಯಿಂದ ರಾಜಕೀಯ ಪ್ರವೇಶಿಸಿದವರು ಹಾಗೂ ದೇಶ ಮರೆತು ತುಷ್ಟೀಕರಣದಲ್ಲಿ ತೊಡಗಿರುವವರು ಜನರ ಸೇವೆ ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಆದಿತ್ಯನಾಥ್ ಟ್ವಿಟರ್‌ನಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತರಾಟೆಗೆ ತೆಗೆದುಕೊಂಡ ದಿನದ ಬಳಿಕ ಭೂಪೇಶ್ ಬಾಘೇಲ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News