ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆ!

Update: 2020-01-01 12:18 GMT

ಮಂಗಳೂರು, ಜ.1: ಐತಿಹಾಸಿಕ ಸ್ಮಾರಕವಾಗಿ ಕುಖ್ಯಾತಿಗೆ ಒಳಗಾಗಿರುವ ಪಂಪ್‌ವೆಲ್ ಮೇಲ್ಸೇತುವೆಯ ಉದ್ಘಾಟನೆ ಇಂದು ನಡೆಯಿತು!
ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಜಿಲ್ಲೆಯ ಶಾಸಕರನ್ನು ಒಳಗೊಂಡ ಬಿಜೆಪಿಯ ಜನಪ್ರತಿನಿಧಿಗಳ ಮುಖವಾಡಗಳೊಂದಿಗೆ ಕಾಂಗ್ರೆಸ್‌ನ ನಾಯಕರು ಹಾಗೂ ಕಾರ್ಯಕರ್ತರು ಇಂದು ಹೀಗೊಂದು ವಿಭಿನ್ನ ಪ್ರತಿಭಟನೆಯ ಮೂಲಕ ಪಂಪ್‌ವೆಲ್ ಮೇಲ್ಸೇತುವೆ ಉದ್ಘಾಟನೆಯ ಅಣಕವಾಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ನೇತೃತ್ವದಲ್ಲಿ ನಡೆದ ಈ ಅಣಕು ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಅವರ ಕಟೌಟ್‌ಗೆ ಬೆಲೆ ನೀರುಳ್ಳಿ- ಬೆಳ್ಳುಳ್ಳಿ ಹಾರವನ್ನು ಹಾಕುವ ಮೂಲಕ ಬೆಲೆ ಏರಿಕೆಯ ಕುರಿತಂತೆಯೂ ಸೂಚ್ಯವಾದ ಪ್ರತಿಭಟನೆಯನ್ನು ಮಾಡಲಾಯಿತು.

ಗೋರಿಗುಡ್ಡ ಕಡೆಯಿಂದ ಪಂಪ್‌ವೆಲ್ ಸಾಗುವ ರಸ್ತೆಯಲ್ಲಿ ಇಂಡಿಯಾನ ಆಸ್ಪತ್ರೆ ಎದುರಿನಿಂದ ಸೇತುವೆಯ ಮೇಲ್ಗಡೆಯಿಂದ ನಡಿಗೆ ಮೂಲಕ ಸಾಗಿದ ಪ್ರತಿಭಟನಾಕಾರರು ಕರ್ನಾಟಕ ಬ್ಯಾಂಕ್ ಪ್ರಧಾನ ಕಚೇರಿ ಸಮೀಪದವರೆಗಿನ ಮೇಲ್ಸೇತುವೆ ಬಳಿ ಕಟ್ಟಲಾದ ಹಗ್ಗವನ್ನು ಕತ್ತರಿಸುವ ಮೂಲಕ ಸೇತುವೆ ಉದ್ಘಾಟನೆಯ ಅಣಕು ಪ್ರದರ್ಶಿದರು. ಮಾತ್ರವಲ್ಲದೆ, ಸಂಸದರು ಹಾಗೂ ಶಾಸಕರ ಪ್ರತಿಕೃತಿಗಳನ್ನು ಸೇತುವೆಯ ಕೆಳಭಾಗಕ್ಕೆ ಎಸೆಯುವ ಮೂಲಕ ವಿರೋಧ ವ್ಯಕ್ತಪಡಿಸಿದರು.

ಬಳಿಕ ಮಾತನಾಡಿದ ಐವನ್ ಡಿಸೋಜಾ, 10 ವರ್ಷಗಳು ಸಂದರೂ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದ ಬಿಜೆಪಿಯ ಜನಪ್ರತಿನಿಧಿಗಳು ನಗರದ ಗೌರವವನ್ನು ಹರಾಜು ಹಾಕಿದ್ದಾರೆ ಎಂದು ಆರೋಪಿಸಿದರು.

ಪ್ರಪಂಚ, ದೇಶದ ಬಗ್ಗೆ ಮಾತನಾಡುವ ಸಂಸದರಿಗೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗದಿರುವುದು ನಾಚಿಕೆಗೇಡಿನ ಸಂಗತಿ. ಈ ಅವೈಜ್ಞಾನಿಕ ಮೇಲ್ಸೇತುವೆಯ ಉದ್ಘಾಟನೆಗೆ ಹಲವಾರು ದಿನಾಂಕಗಳನ್ನು ಈ ಹಿಂದೆ ನೀಡಲಾಗಿತ್ತು. ಆದರೆ ಕಳೆದ ಎರಡು ತಿಂಗಳ ಹಿಂದೆ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳುವುದಾಗಿ ಸಂಸದರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ ನೀಡಿದ್ದ ಬಳಿಕ ಅವರಿಗೆ ಗೌರವ ನೀಡಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಅವರು ಕೊಟ್ಟ ಮಾತನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಅವರ ಜತೆಗೆ ನಗರದ ಮರ್ಯಾದಿಯನ್ನು ಹರಾಜು ಹಾಕಿದ್ದಾರೆ ಎಂದು ಐವನ್ ಡಿಸೋಜಾ ಆರೋಪಿಸಿದರು.

ತಲಪಾಡಿಯಲ್ಲಿ ಸಂಸದರು ಹಾಗೂ ಶಾಸಕರು ಟೋಲ್ ನಿಯಮ ಉಲ್ಲಂಘಿಸಿ ಗುತ್ತಿಗೆದಾರರನ್ನು ತಡೆಹಿಡಿದಿರುವುದು ಕೇವಲ ನಾಟಕ. ಟೋಲ್ ನೀಡದೆ ಪ್ರಯಾಣವನ್ನು ಜನರ ಪರವಾಗಿ ನಾವು ಸ್ವಾಗತಿಸುತ್ತೇವೆ. ಆದರೆ ನಾಳೆ ಏನು ಹಾಗೂ ಮುಂದೆ ಎಷ್ಟು ದಿನದವರೆಗೆ ಪ್ರಯಾಣಿಕರು ಟೋಲ್ ನೀಡದೆ ಪ್ರಯಾಣಿಸಬಹುದು ಎಂಬುದನ್ನು ಸಂಸದರು ತಿಳಿಸಬೇಕು. ಟೋಲ್‌ನ ಗುತ್ತಿಗೆದಾರರು ಬಿಜೆಪಿಯವರು, ಸಂಗ್ರಹ ಮಾಡುವವರು ಬಿಜೆಪಿಯವರೇ. ಅವರನ್ನೇ ಮುಂದಿಟ್ಟು ಟೋಲ್ ನೀಡದಂತೆ ನಾಟಕ ಮಾಡಿರುವುದು ಹಾಸ್ಯಾಸ್ಪದ. ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿ ಕಂಪನಿಯವರ ಮೇಲೆ ಎಫ್‌ಐಆರ್ ದಾಖಲಿಸಿರುವುದು ತಮ್ಮ ತಪ್ಪನ್ನು ಮುಚ್ಚಿ ಹಾಕುವ ಉದ್ದೇಶದಿಂದ ಎಂದವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕರಾದ ಮೊಯ್ದಿನ್ ಬಾವ, ಶಾಹುಲ್ ಹಮೀದ್, ನಾಗೇಂದ್ರ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

'ಇನ್ನು ಸಂಸದರು, ಶಾಸಕರನ್ನು ನಂಬುವುದಿಲ್ಲ'
ನಿನ್ನೆ ಕಾಮಗಾರಿ ವೀಕ್ಷಣೆಗೆ ಬಂದ ಸಂದರ್ಭ ಅಧಿಕಾರಿಗಳು ಇನ್ನೂ ಮೂರು ತಿಂಗಳ ಕಾಮಗಾರಿ ಆಗಬೇಕಾಗಿದೆ ಎಂದು ತಿಳಿಸಿದ್ದಾರೆ. ಆದರೆ ನಿನ್ನೆ ಸಭೆಯಲ್ಲಿ ಸಂಸದರು ಒಂದು ತಿಂಗಳ ಕಾಲಾವಕಾಶವನ್ನು ಗುತ್ತಿಗೆದಾರರು ಕೋರಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಇನ್ನು ಸಂಸದರು, ಶಾಸಕರನ್ನು ನಂಬುವುದಿಲ್ಲ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ, ಫೆಬ್ರವರಿ ಮೊದಲ ವಾರದಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು
- ಐವನ್ ಡಿಸೋಜಾ, ವಿಧಾನ ಪರಿಷತ್ ಸದಸ್ಯರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News