ನವಯುಗ ಸಂಸ್ಥೆಯ ವಿರುದ್ಧವೇ ಬಿಜೆಪಿ ಪ್ರತಿಭಟನೆ

Update: 2020-01-01 14:01 GMT

ಮಂಗಳೂರು,ಜ.1:ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ಅದರಲ್ಲೂ ಪಂಪ್‌ವೆಲ್ ಮೇಲ್ಸೇತುವೆಯನ್ನು ನಿಗದಿತ ಅವಧಿಯೊಳಗೆ ಪೂರೈಸದೆ ಸಂಸದ ನಳಿನ್ ಕುಮಾರ್ ಕಟೀಲ್‌ರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುವಂತೆ ಮಾಡಿದ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಸಂಸ್ಥೆಯ ವಿರುದ್ಧವೇ ಬಿಜೆಪಿಗರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ತಲಪಾಡಿಯಲ್ಲಿ ನಡೆಯಿತು. ಪ್ರತಿಭಟನೆಯ ಭಾಗವಾಗಿ ಬುಧವಾರವಿಡೀ ಟೋಲ್ ಮುಕ್ತ ಪ್ರಯಾಣಕ್ಕೂ ಅವಕಾಶ ಕಲ್ಪಿಸಲಾಯಿತು.

2019ರ ಡಿಸೆಂಬರ್ ಅಂತ್ಯಕ್ಕೆ ಮೇಲ್ಸೇತುವೆ ಕಾಮಗಾರಿ ಮುಗಿಯಲಿದೆ ಎಂದು ನವಯುಗ ಸಂಸ್ಥೆಯ ಭರವಸೆ ನೀಡಿತ್ತು. ಅದರಂತೆ ಜನವರಿ 1ರಂದು ಪಂಪ್‌ವೆಲ್ ಮೇಲ್ಸೇತುವೆಯ ಉದ್ಘಾಟನೆ ನಡೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಹೇಳಿಕೊಂಡಿದ್ದರು. ಆದರೆ ಡಿ.31ರವರೆಗೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಸಂಸದರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ ಜನವರಿ ಅಂತ್ಯದವರೆಗೂ ಟೋಲ್ನಲ್ಲಿ ಶುಲ್ಕ ಪಡೆಯದಂತೆ ತಾಕೀತು ಮಾಡಿದ್ದರು.

ಅದರಂತೆ ಬುಧವಾರ ಬೆಳಗ್ಗೆ ತಲಪಾಡಿ ಟೋಲ್‌ಗೇಟ್ ಬಳಿ ಬಿಜೆಪಿ ಮುಖಂಡರು, ಸಾರ್ವಜನಿಕರು ಜಮಾಯಿಸಿದರು. ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಮುಖಂಡರ ಜೊತೆ ಮಾತುಕತೆ ನಡೆಸಿ 8:30ಕ್ಕೆ ಟೋಲ್ ಗೇಟುಗಳನ್ನು ಸಂಪೂರ್ಣವಾಗಿ ತೆರೆಯುವ ಮೂಲಕ ದಿನದ ಮಟ್ಟಿಗೆ ವಾಹನಗಳಿಗೆ ಟೋಲ್‌ಮುಕ್ತ ಸಂಚಾರಭಾಗ್ಯ ಕಲ್ಪಿಸಿದರು. ಇದರಿಂದಾಗಿ ಸಿಬ್ಬಂದಿಗೂ ಕೆಲಸ ಇಲ್ಲದ ಕಾರಣ ಶುಲ್ಕ ವಸೂಲಿ ಕೇಂದ್ರ ಖಾಲಿಯಾಗಿತ್ತು. ಅನಿರೀಕ್ಷಿತ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲದ ವಾಹನ ಸವಾರರು ಟೋಲ್ ಬಳಿ ನಿಲ್ಲಿಸಿ ಹಣ ಯಾರಲ್ಲಿ ಕೊಡಬೇಕು ಎಂದು ಪರದಾಡಿದ್ದು, ಸ್ಥಳದಲ್ಲಿದ್ದ ಸಾರ್ವಜನಿಕರು ಹೊಸ ವರ್ಷ ಆಗಿರುವುದರಿಂದ ಉಚಿತ ಪ್ರಯಾಣ ಎಂದು ಕಳುಹಿಸುತ್ತಿದ್ದುದು ಕಂಡು ಬಂತು.

ಬಟ್ಟೆ ಮುಚ್ಚಿದ ಅಧ್ಯಕ್ಷ!
ಪ್ರತಿಭಟನಾಕಾರರು ಟೋಲ್‌ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರೂ ಫಾಸ್ಟ್‌ಟ್ಯಾಗ್ ಹೊಂದಿದವರ ಹಣ ಪಾವತಿಯಾಗುವ ಅನುಮಾನ ಪ್ರತಿಭಟನಾಕಾರರಿಗೆ ಎದುರಾಯಿತು. ಈ ಹಿನ್ನೆಲೆಯಲ್ಲಿ ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯುಗುತ್ತು ಬಟ್ಟೆ ವಿತರಿಸಿ ಫಾಸ್ಟ್‌ಟ್ಯಾಗ್ ಸ್ಕ್ಯಾನರ್‌ಗೆ ಕಟ್ಟಿ ಆ ಮೂಲಕ ವಾಹನ ಮಾಲಕರ ಖಾತೆಯಿಂದ ಹಣ ಹೋಗುವುದಕ್ಕೆ ಕಡಿವಾಣ ಹಾಕಿದರು.

ನಷ್ಟ ತಪ್ಪಿಸಲು 1 ದಿನ ಮಾತ್ರ ಟೋಲ್ ಫ್ರೀ!
ನವಯುಗ ಸಂಸ್ಥೆ ಈ ತಿಂಗಳಾಂತ್ಯಕ್ಕೆ ಮೇಲ್ಸೇತುವೆ ಕಾಮಗಾರಿ ಮುಗಿಸುವ ಬಗ್ಗೆ ಭರವಸೆ ನೀಡಿದ್ದು, ಅದುವರೆಗೆ ಟೋಲ್ ಸಂಗ್ರಹಿಸದಂತೆ ಸಂಸದ ನಳಿನ್ ಸೂಚಿಸಿದ್ದರು. ಆದರೆ ಒಂದು ದಿನ ಮಾತ್ರವೇ ಟೋಲ್‌ನಿಂದ ಮುಕ್ತಿ ನೀಡುವ ನಿರ್ಧಾರ ಬಿಜೆಪಿ ಮಾಡಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ವೇದವ್ಯಾಸ ಕಾಮತ್, ಈಗಾಗಲೇ ಸಂಸ್ಥೆ ಆಥಿಕ ಸಮಸ್ಯೆಯಿದೆ ಎಂದು ಕಣ್ಣೀರು ಹಾಕುತ್ತಿದೆ. ಹೀಗಿರುವಾಗ 1 ತಿಂಗಳು ಟೋಲ್ ಪಡೆಯುವುದಕ್ಕೆ ಅಡ್ಡಿಪಡಿಸಿದರೆ ಮೇಲ್ಸೇತುವೆ ಕಾಮಗಾರಿಗೆ ಇನ್ನಷ್ಟು ಅಡ್ಡಿಬಂದು ಜನರು ತೊಂದರೆಗೊಳಗಾಗಲಿದ್ದಾರೆ. ಈ ಕಾರಣಕ್ಕೆ ಒಂದು ದಿನ ಮಾತ್ರವೇ ಟೋಲ್‌ಗೆ ತಡೆ ಹೇರಲಾಗಿದೆ. ನಿಗದಿತ ದಿನದಲ್ಲಿ ಕಾಮಗಾರಿ ಪೂರ್ತಿಯಾಗದಿದ್ದಲ್ಲಿ ಮುಂದಕ್ಕೆ ಕಠಿಣ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸಂಸ್ಥೆ ಅರ್ಥಿಕ ಅಡಚಣೆಯಲ್ಲಿದ್ದ ಕಾರಣ 56 ಕೋ.ರೂ. ಸಾಲವನ್ನೂ ಸರಕಾರ ನೀಡುವಂತೆ ಸಂಸದರು ಮಾಡಿದ್ದಾರೆ. ಸರಕಾರದಿಂದ ಎಲ್ಲ ರೀತಿಯ ಸೌಕರ್ಯ, ಹಣ ಪಡೆದು ಸಂಸ್ಥೆ ವಂಚಿಸಿದೆ. ಹಲವು ಬಾರಿ ಕಾಮಗಾರಿ ಮುಗಿಸುವ ಗಡುವು ಕೊಟ್ಟು ನಂಬಿಕೆ ದ್ರೋಹ ಮಾಡಿದೆ. ನಮ್ಮ ಹಣದಿಂದ ಈಶಾನ್ಯ ಭಾಗದ ಕೆಲಸ ಮಾಡುವುದಾದರೆ ನಾವು ಸುಮ್ಮನಿರಲು ಸಾಧ್ಯವಿಲ್ಲ. ಜನವರಿ 31ರೊಳಗೆ ಕಾಮಗಾರಿ ಮುಕ್ತಾಯಗೊಳಿಸದಿದ್ದಲ್ಲಿ ಉಗ್ರ ಹೋರಾಟ ನಡೆಯಲಿದ್ದು, ಅಂದಿನ ಪ್ರತಿಭಟನೆಯಲ್ಲಿ ಆಗುವ ಅನಾಹುತಗಳಿಗೆ ನವಯುಗ ಸಂಸ್ಥೆಯೇ ನೇರ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ ಪಂಡಿತ್‌ಹೌಸ್ ಮಾತನಾಡಿ, ನವಯುಗ ಸಂಸ್ಥೆಗೆ ಸಂಸದರು ಸಾಕಷ್ಟು ವ್ಯವಸ್ಥೆ ಮಾಡಿಕೊಟ್ಟರೂ ಕೆಲಸ ನಿರ್ವಹಿಸಲು ಅನರ್ಹರು ಎನ್ನುವುದನ್ನು ಸಂಸ್ಥೆ ಸಾಬೀತುಪಡಿಸಿದೆ. ಈಗ ಮತ್ತೊಂದು ಗಡುವು ನೀಡಿದ್ದು, ಅದನ್ನು ಮೀರಿದರೆ ಸಂಸದರ ಸಮ್ಮುಖದಲ್ಲೇ ನವಯುಗದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದರು.

ತಲಪಾಡಿ ಗ್ರಾಪಂ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು, ಜಿಪಂ ಸದಸ್ಯೆ ಧನಲಕ್ಷ್ಮಿ ಗಟ್ಟಿ, ತಾಪಂ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಬಿಜೆಪಿಯ ಮುಖಂಡರಾದ ಟಿ.ಜಿ.ರಾಜಾರಾಮ ಭಟ್, ಸಂತೋಷ್ ಕುಮಾರ್ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಚಂದ್ರಶೇಖರ್ ಉಚ್ಚಿಲ್, ಮೋನಪ್ಪಭಂಡಾರಿ, ಅಶ್ರಫ್ ಹರೇಕಳ, ಅಸ್ಗರ್ ಸಾಂಬಾರ್‌ತೋಟ ಮತ್ತಿತರರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News