ಮದ್ಯ ಮಾರಾಟದ ನಿಗದಿತ ಗುರಿ ಇಳಿಕೆಗೆ ಚಿಂತನೆ: ಡಿಸಿ ಜಗದೀಶ್

Update: 2020-01-01 16:47 GMT

ಉಡುಪಿ, ಜ.1: ಸರಕಾರಕ್ಕೆ ಆದಾಯ ಬರದಿದ್ದರೂ ಪರವಾಗಿಲ್ಲ, ಮದ್ಯ ಸೇವನೆ ಮಾಡುವುದು ಕಡಿಮೆ ಆಗಬೇಕಾಗಿದೆ. ಆದುದರಿಂದ ಜಿಲ್ಲೆಯಲ್ಲಿ ಮದ್ಯ ಮಾರಾಟದ ಗುರಿ ನಿಗದಿಯನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಮುಂಬಯಿ ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್, ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ -ಕರಾವಳಿ, ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ರೋಟರಿ ಕ್ಲಬ್ ಉಡುಪಿ-ಮಣಿಪಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಸ್ಪತ್ರೆಯ ಕಮಲ್ ಎ.ಬಾಳಿಗಾ ಸಭಾಂಗಣದಲ್ಲಿ ಆಯೋಜಿಸಲಾದ 27ನೆ ಮದ್ಯ ವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮದ್ಯ ಸೇವನೆ, ಆರೋಗ್ಯ ಹಾಳು ಮಾಡುವುದರ ಜೊತೆಗೆ ಕುಟುಂಬದ ಮಾನಸಿಕ ಆರೋಗ್ಯ ಹಾಗೂ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಇದೆಲ್ಲವೂ ಸಮಾಜದ ಮೇಲೆ ಬಹಳ ದೊ್ಡ ಪರಿಣಾಮ ಬೀಳುತ್ತದೆ ಎಂದರು.

ಮದ್ಯ ಸೇವಿಸಬೇಡಿ ಎಂದು ಹೇಳುವ ನಾನೇ, ಇಡೀ ಜಿಲ್ಲೆಯಲ್ಲಿ ಮದ್ಯ ಮಾರಾಟ ಮಾಡಲು ಪರವಾನಿಗೆ ನೀಡುವುದು ಮತ್ತು ಸರಬರಾಜು ಮಾಡುವುದು ಹಾಗೂ ಗುರಿಯನ್ನು ನಿಗದಿಪಡಿಸುತ್ತಿದ್ದೇನೆ. ಮದ್ಯ ಸೇವನೆಯಿಂದ ಇಡೀ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 23ಸಾವಿರ ಕೋಟಿ ರೂ. ಆದಾಯ ಬರುತ್ತಿದೆ. ಇದಕ್ಕೆ ಉಡುಪಿ ಜಿಲ್ಲೆಯಿಂದ ಸುಮಾರು ಒಂದು ಸಾವಿರ ಕೋಟಿ ರೂ. ಆದಾಯ ಹೋಗುತ್ತಿದೆ ಎಂದರು.
ಇಷ್ಟು ದೊಡ್ಡ ಮೊತ್ತವನ್ನು ಕುಡಿಯುವ ಬದಲು ಜಿಲ್ಲೆಯಲ್ಲೇ ಬಳಸಿಕೊಂಡರೇ ಇಡೀ ಜಿಲ್ಲೆಯ ಆರ್ಥಿಕ ಚಿತ್ರಣವೇ ಬದಲಾಗಲಿದೆ. ಸರಕಾರದ ಬಜೆಟ್ 2ಲಕ್ಷ 20ಸಾವಿರ ಕೋಟಿ ರೂ. ಆಗಿದ್ದು, ಇದರಲ್ಲಿ ಮದ್ಯ ಮಾರಾಟದ ಆದಾಯ 20ಸಾವಿರ ಕೋಟಿ ರೂ. ಬರದಿದ್ದರೆ ಯಾವುದೇ ನಷ್ಟ ಆುವುದಿಲ್ಲ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕಳೆದ ಐದು ವರ್ಷಗಳಿಂದ ಮದ್ಯವ್ಯಸನದಿಂದ ಮುಕ್ತರಾದ ಹಿರಿಯಡ್ಕ ಕುದಿಬೆಟ್ಟುವಿನ ಪ್ರಶಾಂತ್ ನಾಯಕ್, ಚಂದ್ರಶೇಖರ್ ಮಣಿಪಾಲ, ಪ್ರಶಾಂತ್ ನಾಯಕ್ ಮಣಿಪಾಲ, ಮಾಲ್ದೇಶ್, ಪ್ರತಾಪ್ ಕೆ.ಎನ್. ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ. ವಿ.ಭಂಡಾರಿ ವಹಿಸಿದ್ದರು. ಮಣಿಪಾಲ ಕೆಎಂಸಿಯ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್.ವಿ.ಎನ್.ಶರ್ಮ, ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಅಧ್ಯಕ್ಷ ಡಾ.ಉಮೇಶ್ ಪ್ರಭು, ರೋಟರಿ ಅಧ್ಯಕ್ಷ ರಾಜವರ್ಮ ಅರಿಗ ಉಪಸ್ಥಿತರಿದ್ದರು.

ಆಸ್ಪತ್ರೆಯ ಆಪ್ತ ಸಮಾಲೋಚಕ ನಾಗರಾಜ್ ಮೂರ್ತಿ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಸಮುದಾಯ ಕಾರ್ಯಕರ್ತ ಸುರೇಶ್ ನಾವೂರ್ ವಂದಿಸಿದರು. ಆಪ್ತ ಸಮಾಲೋಚಕರಾದ ಪಂಚಮಿ ಹಾಗೂ ದಿೀಪಶ್ರೀ ಕಾರ್ಯಕ್ರಮ ನಿರೂಪಿಸಿದರು.

'ಮದ್ಯ ಸೇವನೆಯಿಂದ ವರ್ಷಕ್ಕೆ 3 ಮಿಲಿಯನ್ ಜನ ಬಲಿ'
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಮದ್ಯ ಸೇವನೆಯಿಂದ ಪ್ರತಿ ನಿಮಿಷಕ್ಕೆ ಆರು ಮಂದಿ ಹಾಗೂ ವರ್ಷಕ್ಕೆ 3 ಮಿಲಿಯನ್ ಮಂದಿ ಬಲಿಯಾಗುತ್ತಿದ್ದಾರೆ. ಜಗತ್ತಿನಲ್ಲಿ ಶೇ.18 ಆತ್ಮಹತ್ಯೆ, ಶೇ.13 ಫಿಡ್ಸ್ ಕಾಯಿಲೆ, ಶೇ.27ರಷ್ಟು ರಸ್ತೆ ಅಪಘಾತ, ಶೇ.18ರಷ್ಟು ಸಮಾಜದಲ್ಲಿ ಗಲಾಟೆ, ಶೇ.48 ಲೀವರ್ ಕಾಯಿಲೆ, ಶೇ.26ರಷ್ಟು ಬಾಯಿಯ ಕ್ಯಾನ್ಸರ್, ಶೇ.26ರಷ್ಟು ಮೆದೋಜಿರಕಗ್ರಂಥಿಯ ಕಾಯಿಲೆ, ಶೇ.20ರಷ್ಟು ಟಿಬಿ ಕಾಯಿಲೆ, ಶೇ.11ರಷ್ಟು ಕರುಳಿನ ಕ್ಯಾನ್ಸರ್, ಶೇ.5ರಷ್ಟು ಸ್ತನ ಕ್ಯಾನ್ಸರ್, ಶೇ.7ರಷ್ಟು ಬಿಪಿ ಕಾಯಿಲೆಗಳಿಗೆ ಕಾರಣ ಮದ್ಯ ಸೇವನೆಯಾಗಿದೆ ಎಂದು ಡಾ.ಪಿ.ವಿ.ಭಂಡಾರಿ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News