ವಿಧಾನ ಪರಿಷತ್‌ನಲ್ಲಿ ಸಹಕಾರಿ ರಂಗಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಪ್ರಯತ್ನ: ಸಚಿವ ಕೋಟ

Update: 2020-01-01 17:38 GMT

ಮಂಗಳೂರು, ಜ.1: ರಾಜ್ಯ ವಿಧಾನ ಪರಿಷತ್‌ನಲ್ಲಿ ಸಹಕಾರಿ ರಂಗಕ್ಕೆ ಪ್ರಾತಿನಿಧ್ಯ ಕಲ್ಪಿಸಲು ಪ್ರಯತ್ನ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ದ.ಕ.ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಮಂಗಳೂರು ಮತ್ತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಗರದ ಪುರಭವನದಲ್ಲಿ ಜರುಗಿದ ದ.ಕ.ಜಿಲ್ಲಾ ಸೌಹಾರ್ದ ಸಹಕಾರಿಗಳ ಸಮಾವೇಶದಲ್ಲಿ ‘ಒಕ್ಕೂಟದ ಕಚೇರಿಯ ನಾಮಫಲಕ’ ಅನಾವರಣಗೊಳಿಸಿ ಅವರು ಮಾತನಾಡಿದರು.

ಚಿಂತಕರ ಚಾವಡಿ ಎಂದೇ ಬಿಂಬಿಸಲ್ಪಟ್ಟ ವಿಧಾನ ಪರಿಷತ್‌ನಲ್ಲಿ ಸಹಕಾರಿ ರಂಗಕ್ಕೆ ಯಾವತ್ತೋ ಪ್ರಾತಿನಿಧ್ಯ ಸಿಗಬೇಕಿತ್ತು. ಆದರೆ ಕಾರಣಾಂತರಿಂದ ಸಿಕ್ಕಿಲ್ಲ. ಚಿಂತಕರ ಚಾವಡಿಯು ಇದೀಗ ಚಿನ್ನದ ಅಂಗಡಿ ಥರ ಆಗಿದೆ. ಕಾರ್ಮಿಕರ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡಬಲ್ಲವರು ವಿಧಾನ ಪರಿಷತ್‌ನಲ್ಲಿರಬೇಕು. ಆವಾಗಲೇ ಅದರ ಘನತೆ ಹೆಚ್ಚಲಿದೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಸೌಹಾರ್ದ ಕಾಯ್ದೆಯ ತಿದ್ದುಪಡಿಗೆ ಸಂಬಂಧಿಸಿ ಮುಖ್ಯಮಂತ್ರಿಯ ಗಮನ ಸೆಳೆಯಲಾಗುವುದು. ಸೌಹಾರ್ದ ರಂಗವು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದರು.

ಒಡಿಯೂರು ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಅಶೀರ್ವಚನ ನೀಡಿ ಬದುಕಿನಲ್ಲಿ ಸಾಮಾಜಿಕ ಬದ್ಧತೆ ಮುಖ್ಯ. ಆವಾಗ ಸಹಕಾರಿ ರಂಗ ಮತ್ತಷ್ಟು ಎತ್ತರಕ್ಕೇರಲಿದೆ. ಸಹಕಾರಿ ತತ್ವವು ಬದುಕಿನ ತತ್ವವೂ ಆಗಿದೆ. ಅದು ನಿಂತ ನೀರಾಗಬಾರದು ಎಂದರು.

ಕೋ-ಸಿಬಿಲ್ ತಂತ್ರಾಂಶ ಉದ್ಘಾಟಿಸಿ ಮಾತನಾಡಿದ ಎಸ್‌ಸಿಡಿಸಿಸಿ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸೌಹಾರ್ದ ಸಹಕಾರಗಳು ಜನರಿಗೆ ಹತ್ತಿರವಾಗಿದೆ. ಸಹಕಾರಿ ಬ್ಯಾಂಕ್‌ಗಳು ರಾಷ್ಟ್ರೀಕೃತ ಬ್ಯಾಂಕ್‌ನಂತಲ್ಲ. ನಮ್ಮಲ್ಲಿ ಬಡ್ಡಿಗೆ ಬಡ್ಡಿ ಇಲ್ಲ. ಅಸಲಿಗೆ ಮಾತ್ರ ಬಡ್ಡಿ ಹಾಕಲಾಗುತ್ತದೆ. ಇದರ ಬಗ್ಗೆ ಗ್ರಾಹಕರಿಗೆ ಮನದಟ್ಟು ಮಾಡಿಕೊಡಬೇಕಿದೆ. ನಾವಿಂದು ತಂತ್ರಜ್ಞಾನ ಯುಗದಲ್ಲಿರುವ ಕಾರಣ ಕೋ-ಸಿಬಿಲ್ ತಂತ್ರಾಂಶದ ಅಳವಡಿಕೆಯು ಶ್ಲಾಘನೀಯ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್ ಸಮಾವೇಶವನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಆರ್ಥಿಕ ನಿರ್ವಹಣೆ ಮತ್ತು ಸಾಮಾಜಿಕ ಕಳಕಳಿಯಲ್ಲಿ ತೊಡಗಿಸಿಕೊಂಡ ಮೂಡುಬಿದಿರೆಯ ವಂದೇ ಮಾತರಂ ಸೌ.ಸ., ದೇರಳಕಟ್ಟೆಯ ಮಹಿಳಾ ನಿಧಿ ಸೌ.ಸ., ಪುತ್ತೂರಿನ ಸ್ವಾಭಿಮಾನಿ ಸೌ.ಸ., ಕುಳಾಯಿಯ ಕಾಂಚನಾ ಸೌ.ಸ., ಮಂಗಳೂರಿನ ಲಕ್ಷ್ಮಿ ಸೌ.ಸ.ಗೆ ಪ್ರಶಸ್ತಿ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಟಿ.ಎಚ್. ಕೃಷ್ಣಾ ರೆಡ್ಡಿ, ನಿರ್ದೇಶಲ ಮಂಜುನಾಥ್ ಕೆ.ಎಸ್., ದ.ಕ.ಜಿಲ್ಲಾ ಸಹಕಾರಿಗಳ ಉಪನಿಬಂಧಕ ಪ್ರವೀಣ್ ನಾಯಕ್, ದ.ಕ.ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಕೊಡವೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಡಾ. ಲ್ಯಾನ್ಸಿ ಎಚ್. ಪಾಯಸ್ ಮತ್ತಿತರರು ಭಾಗವಹಿಸಿದ್ದರು.

ವೇದಿಕೆಯಲ್ಲಿ ಸೌಹಾರ್ದ ಸಹಕಾರಿಯ ಉಪಾಧ್ಯಕ್ಷ ಜಿ.ಅರ್. ಪ್ರಸಾದ್, ಸಿಇಒ ಎಂ. ಉಗ್ಗಪ್ಪ ಶೆಟ್ಟಿ, ನಿರ್ದೇಶಕರಾದ ಭಾಸ್ಕರ ಎಸ್. ಕೋಟ್ಯಾನ್, ನಾರಾಯಣ ಶೆಟ್ಟಿ, ಲ್ಯಾಸ್ಸಿ ಎ. ಪಿರೇರಾ, ಮೋಹನ ಪ್ರಭು, ನವೀನ್ ಶೆಟ್ಟಿ, ಭಾರತಿ ಜಿ. ಭಟ್, ಸುಮನಾ ಶರಣ್, ದೇವಿಪ್ರಸಾದ್ ಕೆ., ನಾರಾಯಣ ಕೆ.ಆರ್., ಎಸ್. ಸತೀಶ್ ನಾಯಕ್, ವಲ್ಸರಾಜ್, ಗಣೇಶ್ ಶೆಣೈ, ಎಂ. ವಾಸುದೇವ ಭಟ್, ಪ್ರಕಾಶ್ ಕೋಟ್ಯಾನ್, ರೇವತಿ ಅಶೋಕ್, ಭಾಸ್ಕರ ದೇವಸ್ಯ, ಚಿದಾನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News