ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಝಾಗೆ ಗೃಹಬಂಧನ: ಆರೋಪ
ಶ್ರೀಗನರ, ಜ. 2: ದಕ್ಷಿಣ ಕಾಶ್ಮೀರದಲ್ಲಿರುವ ತನ್ನ ಅಜ್ಜ ಹಾಗೂ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮುಫ್ತಿ ಮುಹಮ್ಮದ್ ಸಯೀದ್ ಅವರ ಸಮಾಧಿಗೆ ಭೇಟಿ ನೀಡಲು ಪ್ರಯತ್ನಿಸಿದ ಬಳಿಕ ಪೊಲೀಸರು ತನ್ನನ್ನು ಇಲ್ಲಿರುವ ನಿವಾಸದಲ್ಲಿ ವಶದಲ್ಲಿ ಇರಿಸಿದ್ದಾರೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಝಾ ಮುಫ್ತಿ ಗುರುವಾರ ಆರೋಪಿಸಿದ್ದಾರೆ. ಇಲ್ತಿಝಾ ಅನಂತ್‌ನಾಗ್ ಜಿಲ್ಲೆಯ ಬ್ರಿಜ್‌ಬೆಹ್ರಾದಲ್ಲಿರುವ ತನ್ನ ಅಜ್ಜನ ಸಮಾಧಿಗೆ ಭೇಟಿ ನೀಡಲು ಅನುಮತಿ ಕೋರಿದ್ದರು. ಆದುದರಿಂದ ಎಲ್ಲಿಗೂ ಹೋಗದಂತೆ ಅವರನ್ನು ಅವರ ಮನೆಯಲ್ಲೇ ವಶದಲ್ಲಿ ಇರಿಸಿದ್ದೇವೆ ಎಂದು ಅವರ ವಿಶೇಷ ಭದ್ರತಾ ಗುಂಪು ಹೇಳಿದೆ.
‘‘ನನ್ನ ಮನೆಯಲ್ಲಿ ನನ್ನನ್ನು ಬಂಧನದಲ್ಲಿ ಇರಿಸಲಾಗಿದೆ. ಎಲ್ಲಿಗೆ ಹೋಗಲೂ ಅವಕಾಶ ನೀಡುತ್ತಿಲ್ಲ’’ ಎಂದು ಇಲ್ತಿಝಾ ಹೇಳಿದ್ದಾರೆ. ಇಲ್ತಿಝಾ ಅವರನ್ನು ವಶದಲ್ಲಿ ಇರಿಸಲಾಗಿದೆ ಎಂಬುದನ್ನು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಸುವ್ಯವಸ್ಥೆ) ಮುನೀರ್ ಖಾನ್ ನಿರಾಕರಿಸಿದ್ದಾರೆ.
‘‘ಅವರು ಸಮಾಧಿಗೆ ಭೇಟಿ ನೀಡಲು ಅನಂತ್‌ನಾಗ್ ಜಿಲ್ಲಾಡಳಿತ ಅನುಮತಿ ನೀಡಿಲ್ಲ’’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಸ್ಥಳಕ್ಕೆ ಭೇಟಿ ನೀಡುವ ಮೊದಲು ಪೊಲೀಸರಿಂದ ಅನುಮತಿ ಪಡೆಯುವ ಎಸ್‌ಎಸ್‌ಜಿ ರಕ್ಷಣೆಗೆ ಅವರು ಒಳಗಾಗಿದ್ದಾರೆ ಎಂಬುದನ್ನು ಕೂಡ ನಾವು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು ಎಂದು ಖಾನ್ ತಿಳಿಸಿದ್ದಾರೆ.