ಅಂತರ್‌ರಾಷ್ಟ್ರೀಯ ಹಾಕಿಗೆ ಸುನೀತಾ ಲಕ್ರಾ ವಿದಾಯ

Update: 2020-01-02 18:23 GMT

ಹೊಸದಿಲ್ಲಿ, ಜ.2: ಭಾರತ ಮಹಿಳಾ ಹಾಕಿ ತಂಡದ ಡಿಫೆಂಡರ್ ಸುನೀತಾ ಲಕ್ರಾ ಗುರುವಾರ ಅಂತರ್‌ರಾಷ್ಟ್ರೀಯ ಹಾಕಿಯಿಂದ ನಿವೃತ್ತರಾದರು. ಮಂಡಿನೋವಿನಿಂದ ಬಳಲುತ್ತಿರುವ ಸುನೀತಾ, ಮತ್ತೊಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.

‘‘ಇಂದು ನನ್ನ ಪಾಲಿಗೆ ಅತ್ಯಂತ ಭಾವನಾತ್ಮಕ ದಿನ. ನಾನು ಅಂತರ್‌ರಾಷ್ಟ್ರೀಯ ಹಾಕಿ ಕ್ರೀಡೆಯಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಭಾಗ್ಯ ನನಗೆ ಲಭಿಸಿತ್ತು. ಆಗ ಭಾರತ ಮೂರು ದಶಕಗಳ ಬಳಿಕ ಮೊದಲ ಬಾರಿ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡಿತ್ತು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಭಾರತೀಯ ತಂಡದ ಭಾಗವಾಗುವ ಬಯಕೆ ನನ್ನಲ್ಲಿತ್ತು. ಮಂಡಿನೋವು ನನ್ನ ಕನಸನ್ನು ಭಗ್ನಗೊಳಿಸಿತು. ಮುಂದಿನ ದಿನಗಳಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ನನಗೆ ತಿಳಿಸಿದ್ದಾರೆ. ನಾನು ಸಂಪೂರ್ಣ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕಾಗಬಹುದೆಂದು ನನಗೆ ಗೊತ್ತಿಲ್ಲ. ಗಾಯದಿಂದ ಚೇತರಿಸಿಕೊಂಡ ಬಳಿಕ ದೇಶೀಯ ಹಾಕಿಯಲ್ಲಿ ಆಡುವುದನ್ನು ಮುಂದುವರಿಸುವೆ. ನನಗೆ ಉದ್ಯೋಗ ನೀಡಿ, ವೃತ್ತಿಜೀವನಕ್ಕೆ ಬೆಂಬಲ ನೀಡಿದ್ದ ನಲ್ಕೋ ಪರವಾಗಿ ಆಡುವೆ’’ ಎಂದು ಸುನೀತಾ ಹೇಳಿದ್ದಾರೆ.

2008ರಿಂದ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ಸುನೀತಾ 2018ರ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡದ ಸಾರಥ್ಯವಹಿಸಿದ್ದರು. ಭಾರತ ಈ ಟೂರ್ನಿಯಲ್ಲಿ ರನ್ನರ್ಸ್‌ಅಪ್ ಆಗಿತ್ತು. 2018ರ ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಭಾರತೀಯ ತಂಡದ ಭಾಗವಾಗಿದ್ದರು. 2014ರ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ ಕಂಚು ಗೆದ್ದ ತಂಡದಲ್ಲೂ ಇದ್ದರು. ಸುನೀತಾ ವೃತ್ತಿಜೀವನದಲ್ಲಿ ಒಟ್ಟು 139 ಪಂದ್ಯಗಳಲ್ಲಿ ಆಡಿದ್ದಾರೆ.

ನೆನಪುಗಳು ಸ್ಮರಣೀಯ

ನಾನು ಕ್ರೀಡೆಯಲ್ಲಿ ದೀರ್ಘ ಸಮಯ ಕಳೆದಿದ್ದೇನೆ. ಭಾರತೀಯ ಹಾಕಿ ತಂಡದ ಜೊತೆ ಕೆಲವು ಸ್ಮರಣೀಯ ಕ್ಷಣವನ್ನು ಹೊತ್ತೊಯ್ದಿದ್ದೇನೆ. ಇಡೀ ತಂಡ ನನ್ನ ಬೆಂಬಲಕ್ಕೆ ನಿಂತಿತ್ತು. ಮನೆಯಿಂದ ಹೊರಗೆ ತಂಡದ ಹುಡುಗಿಯರೇ ನನ್ನ ಕುಟುಂಬವಾಗಿದ್ದರು. ಹಾಕಿ ಇಂಡಿಯಾಕ್ಕೆ ಹೃತ್ಪೂರ್ವಕ ಧನ್ಯವಾದಗಳು. ನನಗೆ ಗಾಯವಾದಾಗ ಹಾಕಿ ಇಂಡಿಯಾ ಉತ್ತಮ ಚಿಕಿತ್ಸೆ ನೀಡಿತ್ತು. ಒಡಿಶಾದಲ್ಲಿರುವ ನನ್ನ ಕುಟುಂಬ, ನನ್ನ ಪತಿ ಹಾಗೂ ಸ್ನೇಹಿತರ ಬೆಂಬಲವನ್ನು ಮರೆಯಲಾರೆ. ಇವರೆಲ್ಲರ ಪ್ರೋತ್ಸಾಹವಿಲ್ಲದೆ ನಾನು ಇಲ್ಲಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ’’ ಎಂದು ಲಕ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News