×
Ad

ರಾಜಸ್ಥಾನ ರಾಯಲ್ಸ್ ಸ್ಪಿನ್ ಸಲಹೆಗಾರನಾಗಿ ಐಶ್ ಸೋಧಿ ಆಯ್ಕೆ

Update: 2020-01-02 23:54 IST

ಮುಂಬೈ, ಜ.2: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ತಂಡವು ಲೆಗ್ ಸ್ಪಿನ್ನರ್ ಐಶ್ ಸೋಧಿಗೆ ಎರಡು ಪಾತ್ರ ನಿಭಾಯಿಸುವ ಜವಾಬ್ದಾರಿ ನೀಡಿದೆ. ಸೋಧಿ ಅವರು ಸ್ಪಿನ್ ಸಲಹೆಗಾರನಾಗಿ ತಂಡದ ಸಹಾಯಕ ಸಿಬ್ಬಂದಿ ವಿಭಾಗಕ್ಕೆ ಸೇರ್ಪಡೆಯಾಗಲಿದ್ದಾರೆ.ಮುಂಬರುವ ಆವೃತ್ತಿಯ ಲೀಗ್‌ನಲ್ಲಿ ತಂಡದ ನಿರ್ವಹಣೆಯಲ್ಲೂ ಕಾಣಿಕೆ ನೀಡಲಿದ್ದಾರೆ.

ನ್ಯೂಝಿಲ್ಯಾಂಡ್‌ನ ಕ್ರಿಕೆಟಿಗ ಸೋಧಿ ರಾಜಸ್ಥಾನದ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ ಹಾಗೂ ಮುಖ್ಯ ನಿರ್ವಹಣಾಧಿಕಾರಿ ಜಾಕ್ ಲ್ಯೂಶ್ ಮೆಕ್ರಮ್ ಜೊತೆಗೆ ಕೆಲಸ ಮಾಡಲಿದ್ದಾರೆ. 2018 ಹಾಗೂ 2019ರ ಆವೃತ್ತಿಯ ಲೀಗ್‌ನಲ್ಲಿ ರಾಜಸ್ಥಾನ ಫ್ರಾಂಚೈಸಿ ಪರ ಆಡಿದ್ದ ಸೋಧಿ ರಾಜಸ್ಥಾನ ಫ್ರಾಂಚೈಸಿಯ ದೂರದೃಷ್ಟಿ, ಗುರಿಯೊಂದಿಗೆ ತಂಡದೊಳಗೆ ಹಾಗೂ ಹೊರಗೆ ಪ್ರಮುಖ ಪಾತ್ರವಹಿಸಲು ನಿರ್ಧರಿಸಿದ್ದಾರೆ.

‘‘ಸೋಧಿ ಅವರನ್ನು ಹೊಸ ಪಾತ್ರದೊಂದಿಗೆ ರಾಯಲ್ಸ್ ಕುಟುಂಬಕ್ಕೆ ಸ್ವಾಗತಿಸಲು ನಮಗೆ ಸಂತೋಷವಾಗುತ್ತಿದೆ. ಎರಡು ಪಾತ್ರದ ಮೂಲಕ ರಾಯಲ್ಸ್ ತಂಡವನ್ನು ಸೇರಿಕೊಂಡಿರುವ ಅವರು ಯುವ ಪ್ರತಿಭೆಗಳ ಗುರುತಿಸುವಿಕೆ ಹಾಗೂ ಬೆಳೆಸುವಲ್ಲಿ ಬದ್ಧತೆ ತೋರಲಿದ್ದಾರೆ. ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಐಶ್‌ಗೆ ನಾನು ಅಭಿನಂದನೆ ಸಲ್ಲಿಸುವೆ’’ ಎಂದು ರಾಯಲ್ಸ್ ಕ್ರಿಕೆಟ್ ಮುಖ್ಯಸ್ಥ ಝುಬಿನ್ ಭರೂಚಾ ಹೇಳಿದ್ದಾರೆ.

ಸೋಧಿ ರಾಜಸ್ಥಾನದ ಪರ 8 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ. 6.69ರ ಇಕಾನಮಿ ದರದಲ್ಲಿ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ 2020ರ ಹರಾಜಿಗೆ ಮೊದಲು ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಹೊಸ ಪಾತ್ರದೊಂದಿಗೆ ಫ್ರಾಂಚೈಸಿಗೆ ವಾಪಸಾಗಿದ್ದಾರೆ. ‘‘ಎರಡು ಜವಾಬ್ದಾರಿಯೊಂದಿಗೆ ರಾಯಲ್ಸ್ ತಂಡದ ಹೊಸ ಸವಾಲು ಸ್ವೀಕರಿಸಲು ನನಗೆ ಸಂತೋಷವಾಗುತ್ತಿದೆ. ರಾಯಲ್ಸ್ ಪರ 2 ಋತುವಿನಲ್ಲಿ ಆಡಿದ್ದೆ. ಫ್ರಾಂಚೈಸಿಯೊಂದಿಗಿರುವ ಎಲ್ಲ ಜನರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುವೆ. ಎಲ್ಲರೂ ನನಗೆ ಬೆಂಬಲ ನೀಡಿದ್ದರು’’ ಎಂದು ಸೋಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News