ಭಟ್ಕಳ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವೆಲ್ಫೇರ್ ಪಾರ್ಟಿಯಿಂದ ಪ್ರತಿಭಟನೆ

Update: 2020-01-02 18:43 GMT

ಭಟ್ಕಳ: ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸಂವಿಧಾನ ಬಾಹಿರವಾಗಿದ್ದು ಕೂಡಲೇ ಈ ಕಾನೂನನ್ನು ಹಿಂಪಡೆದು ಸಂವಿಧಾನವನ್ನು ರಕ್ಷಿಸಬೇಕೆಂದು ಆಗ್ರಹಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಭಟ್ಕಳ ವತಿಯಿಂದ ಗುರುವಾರ ಸಂಜೆ ಇಲ್ಲಿನ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ಅರ್ಪಿಸಲಾಯಿತು. 

ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಪೌರತ್ವ ತಿದ್ದುಪಡೆ ಕಾನೂನನ್ನು ಖಂಡಿಸಿದ್ದು, ಧರ್ಮದ ಮೂಲಕ ದೇಶವನ್ನು ಒಡೆಯುವ ತಂತ್ರವಾಗಿದೆ ಎಂದು ಆರೋಪಿಸಿದ್ದಾರೆ. 

ಈ  ಕಾಯ್ದೆಯಿಂದ, ಬಾಂಗ್ಲಾದಿಂದ ಈಶಾನ್ಯ ಭಾರತ ರಾಜ್ಯಗಳಿಗೆ ವಲಸೆ ಬಂದಿರುವ ಹಿಂದೂಗಳಿಗೆ ಪೌರತ್ವ ದೊರೆಯುತ್ತದೆ. ಇದರಿಂದಾಗಿ ಈಶಾನ್ಯ ಭಾರತದ ಬುಡಕಟ್ಟು ಸಮುದಾಯಗಳ ಸಂಸ್ಕೃತಿಗೆ ಧಕ್ಕೆಯಾಗುತ್ತದೆ. ಇಲ್ಲಿನ ಕಾನೂನು ಸುವ್ಯವಸ್ಥೆಯ ಹದಗೆಡುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ. 

ಪ್ರಮುಖವಾಗಿ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಎಲ್ಲ ಧರ್ಮದವರಿಗೂ ಭಾರತದ ಪೌರತ್ವ ನೀಡುವುದು ಈ ಕಾಯ್ದೆಯ ಅಂಶವಾಗಿದ್ದು ಇದು ಹಿಂದೂ ರಾಷ್ಟ್ರದ ಪರಿಕಲ್ಪನೆಯಲ್ಲಿ ದೇಶದ ಮೇಲೆ ಹೇರುತ್ತಿರುವ ಕರಾಳ ಹಾಗೂ ಅಲ್ಪಸಂಖ್ಯಾತರ ವಿರೋಧಿ ಕಾಯ್ದೆಯಾಗಿದ್ದು ಇದನ್ನು ಜಾರಿಗೊಳಿಸದಂತೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮನವಿ ಪತ್ರದಲ್ಲಿ ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೌಕತ್ ಕತೀಬ್ ಸೇರಿದಂತೆ ಮುಖಂಡರಾದ ಅಬ್ದುಲ್ ಜಬ್ಬಾರ್ ಅಸದಿ, ಆಸೀಫ್ ಶೇಖ್, ತಲ್ಹಾ ಸಿದ್ದಿಬಾಪ, ಯೂನುಸ್ ರುಕ್ನುದ್ದೀನ್, ಮುಜಾಹಿದ್ ಮುಸ್ತಫಾ ಮತ್ತಿತರರು ಉಪಸ್ಥಿರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News