"ಮಿಶನರಿ ಶಾಲೆಗಳಲ್ಲಿ ಕಲಿತವರು ಹೊರಗೆ ಬೀಫ್ ತಿನ್ನುತ್ತಾರೆ"

Update: 2020-01-03 04:46 GMT

ಪಾಟ್ನಾ, ಜ.3: ಮಿಶನರಿ ಶಾಲೆಗಳಲ್ಲಿ ಕಲಿತವರಿಗೆ ಭಾರತೀಯ ಸಂಸ್ಕೃತಿಯ ಅರಿವು ಇಲ್ಲ; ಈ ಕಾರಣದಿಂದ ಅವರು ವಿದೇಶಗಳಿಗೆ ತೆರಳಿದಾಗ ಬೀಫ್ ತಿನ್ನುತ್ತಾರೆ ಎಂದು ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಇದಕ್ಕೆ ಪರಿಹಾರವನ್ನೂ ಅವರು ಸೂಚಿಸಿದ್ದಾರೆ: ಭಗವದ್ಗೀತೆ ಮತ್ತು ಹನುಮಾನ್ ಚಾಲೀಸ್‌ನಂಥ ಧರ್ಮಗ್ರಂಥಗಳ ಶ್ಲೋಕ, ಚರಣಗಳನ್ನು ಬೋಧಿಸಬೇಕು!

"ಇಲ್ಲಿ ನೆರೆದಿರುವ ಜನರಿಗೆ ನಾನು ಹೇಳಬಯಸುವುದೇನೆಂದರೆ, ಈ ಅಭ್ಯಾಸ ಖಾಸಗಿ ಶಾಲೆಗಳಿಂದ ಆರಂಭವಾಗಬೇಕು. ಏಕೆಂದರೆ, ಸರ್ಕಾರಿ ಶಾಲೆಗಳಲ್ಲಿ ಇದನ್ನು ಜಾರಿಗೆ ತಂದರೆ ಕೇಸರಿ ಕಾರ್ಯಸೂಚಿ ಹೇರುತ್ತಿದ್ದೇವೆ ಎಂಬ ಆರೋಪಕ್ಕೆ ಆಹ್ವಾನ ನೀಡಿದಂತಾಗುತ್ತದೆ" ಎಂದು ಬೆಗುಸರಾಯ್ ಲೋಕಸಭಾ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಹೇಳಿದರು.

"ಕಾನ್ವೆಂಟ್ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಐಐಟಿ ಪದವೀಧರರಾಗುತ್ತಿದ್ದಾರೆ, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧೀಕ್ಷಕರಾಗುತ್ತಿದ್ದಾರೆ. ಇವರಲ್ಲಿ ಬಹುತೇಕ ಮಂದಿ ವಿದೇಶಗಳಲ್ಲಿ ಬೀಫ್ ತಿನ್ನುತ್ತಾರೆ. ಇದಕ್ಕೆ ದೇಶದ ಸಂಸ್ಕೃತಿ ಮತ್ತು ಧಾರ್ಮಿಕ ಸಂಪ್ರದಾಯದ ಬಗ್ಗೆ ಅರಿವು ಇಲ್ಲದಿರುವುದು ಕಾರಣ" ಎಂದು ತಿಳಿಸಿದರು.

 ಸಿಎಎ ವಿರುದ್ಧ ಹೋರಾಡುತ್ತಿರುವ ಪ್ರತಿಭಟನಾಕಾರರ ವಿರುದ್ಧ ಇತ್ತೀಚೆಗೆ ಅವರು ನೀಡಿದ ಹೇಳಿಕೆ ಕೂಡಾ ವಿವಾದಕ್ಕೆ ಕಾರಣವಾಗಿತ್ತು. ರಾಹುಲ್ ಗಾಂಧಿ ಹಾಗೂ ತುಕ್ಡೇ ತುಕ್ಡೇ ಗ್ಯಾಂಗ್ 1947ರ ಪರಿಸ್ಥಿತಿಯ ಪುನರ್ ಸೃಷ್ಟಿಗೆ ಹೊರಟಿದೆ. ಬ್ರಿಟಿಷರು ಮತ್ತು ಮೊಘಲರು ಸಾಧಿಲಾಗದ್ದನ್ನು ಅಂದರೆ ದೇಶವನ್ನು ವಿಭಜಿಸಲು ರಾಹುಲ್, ಕಾಂಗ್ರೆಸ್ ಹಾಗೂ ಉವೈಸಿ ಹೊರಟಿದ್ದಾರೆ ಎಂದು ಆಪಾದಿಸಿದ್ದರು.

ಸಿಂಗ್ ಹೇಳಿಕೆಗೆ ವಿರೋಧ ಪಕ್ಷಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿವೆ. ಕರ್ನಾಟಕದ ಶಾಸಕ ರಿಝ್ವಾನ್ ಅರ್ಷದ್ ಈ ಬಗ್ಗೆ ಟ್ವೀಟ್ ಮಾಡಿ, "ಭಾರತದ ಆರ್ಥಿಕ ಸ್ಥಿತಿ ಚಿಂತಿಸಬೇಕಾದ ವಿಷಯವಲ್ಲವೇ?" ಎಂದು ಕುಟುಕಿದ್ದಾರೆ. ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಗಗನ್ ಟ್ವೀಟ್ ಮಾಡಿ, "ಬಿಜೆಪಿ ಆಡಳಿತದ ಗುಜರಾತ್ ಗರಿಷ್ಠ ಬೀಫ್ ಪೂರೈಸುವ ರಾಜ್ಯ. ಇದರಿಂದ ಏನು ತಿಳಿಯುತ್ತದೆ" ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News