ರಾಜಸ್ಥಾನದಲ್ಲಿ ಮಕ್ಕಳ ಮರಣ ಪ್ರಕರಣ: ಸೋನಿಯಾ ಆತಂಕ,ಬಿಜೆಪಿ, ಬಿಎಸ್ಪಿ ವಾಗ್ದಾಳಿ

Update: 2020-01-03 05:33 GMT

ಹೊಸದಿಲ್ಲಿ,ಜ.3: ರಾಜಸ್ಥಾನದ ಕೋಟಾದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಡಿಸೆಂಬರ್‌ನಲ್ಲಿ 100ಕ್ಕೂ ಅಧಿಕ ಹಸುಗೂಸುಗಳು ಮೃತಪಟ್ಟಿರುವ ಕುರಿತಂತೆ ವಿರೋಧ ಪಕ್ಷಗಳು ಟೀಕಿಸುತ್ತಿರುವ ನಡುವೆ ಗುರುವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಸೋನಿಯಾ ಗಾಂಧಿ ಅವರು ರಾಜಸ್ಥಾನದ ಉಸ್ತುವಾರಿ ವಹಿಸಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆಗೆ ಸಮನ್ಸ್ ನೀಡಿದ್ದಾರೆ. ‘‘ಎಳೆಯ ಮಕ್ಕಳ ಮರಣಕ್ಕೆ ಕಾರಣವೇನೆಂದು ತಿಳಿಯಲು ಸೋನಿಯಾ ಗಾಂಧಿ ಬಯಸಿದ್ದಾರೆ. ಇದು ತುಂಬಾ ಬೇಸರದ ಪರಿಸ್ಥಿತಿ. ವರದಿಯ ಪ್ರಕಾರ ಕಾರ್ಯನಿರ್ವಹಿಸುವಂತೆ ಸಿಎಂಗೆ ತಿಳಿಸಲಾಗಿದೆ. ಕಾಂಗ್ರೆಸ್ ಅಸೂಕ್ಷ್ಮತೆಯಿಂದ ವರ್ತಿಸುತ್ತಿದೆ ಎಂಬ ಬಿಜೆಪಿಯ ಆರೋಪದಲ್ಲಿ ಸತ್ಯಾಂಶವಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು, ಹೊಣೆಯಾದವರಿಗೆ ಶಿಕ್ಷೆ ನೀಡಲಾಗುವುದು’’ ಎಂದು ಸೋನಿಯಾ ಭೇಟಿಯ ಬಳಿಕ ಪಾಂಡೆ ತಿಳಿಸಿದ್ದಾರೆ.

ಮಕ್ಕಳ ಸಾವಿನ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಉತ್ತರಪ್ರದೇಶ ಮುಖ್ಯಮಂತ್ರಿ  ಆದಿತ್ಯನಾಥ್,‘‘100ಕ್ಕೂ ಅಧಿಕ ಮುಗ್ದ ಮಕ್ಕಳ ಮರಣ ತೀವ್ರ ಬೇಸರದ ಹಾಗೂ ಹೃದಯ ಕಲಕುವ ವಿಚಾರವಾಗಿದೆ. ಮಹಿಳೆಯಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾಗಾಂಧಿ ತಾಯಿಯಂದಿರ ದುಃಖವನ್ನು ಅರ್ಥ ಮಾಡಿಕೊಳ್ಳಲು ಶಕ್ತರಾಗಿಲ್ಲ. ಪ್ರಿಯಾಂಕಾ ಉತ್ತರಪ್ರದೇಶಕ್ಕೆ ಬಂದು ರಾಜಕೀಯ ಮಾಡುವ ಬದಲಿಗೆ ದುಃಖತಪ್ತ ತಾಯಂದಿರ ಕಣ್ಣೀರನ್ನು ಒರೆಸಲಿ’’ ಎಂದು ಹೇಳಿದ್ದಾರೆ.

  ‘‘ಅಶೋಕ್ ಗೆಹ್ಲೋಟ್ ಓರ್ವ ಅಸೂಕ್ಷ್ಮತೆಯ, ಆಸಕ್ತಿರಹಿತ ಹಾಗೂ ಬೇಜವಾಬ್ದಾರಿ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ನ ಪ್ರಮುಖ ನಾಯಕರು ಅದರಲ್ಲೂ ಮುಖ್ಯವಾಗಿ ಪ್ರಧಾನ ಕಾರ್ಯದರ್ಶಿ(ಪ್ರಿಯಾಂಕಾ)ಈ ಘಟನೆಯ ಬಗ್ಗೆ ವೌನ ವಹಿಸಿದ್ದು ತುಂಬಾ ಬೇಸರದ ವಿಚಾರ. ಉತ್ತರಪ್ರದೇಶಕ್ಕೆ ಭೇಟಿ ನೀಡಿ ಪ್ರತಿಭಟನೆಯ ವೇಳೆ ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಸಾಂತ್ವಾನ ಹೇಳಿದ ರೀತಿಯಲ್ಲಿಯೇ ತಮ್ಮದೇ ಪಕ್ಷದ ನೇತೃತ್ವದ ಸರಕಾರದ ನಿರ್ಲಕ್ಷದಿಂದ ರಾಜಸ್ಥಾನದಲ್ಲಿ ಮಕ್ಕಳನ್ನು ಕಳೆದುಕೊಂಡಿರುವ ತಾಯಂದಿರನ್ನು ಭೇಟಿಯಾಗಿ ಸಮಾಧಾನ ಮಾಡಲಿ’’ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News