ಪೌರತ್ವ ಕಾಯ್ದೆ ಹಿಂದೆಗೆಯುವ ಪ್ರಶ್ನೆಯೇ ಇಲ್ಲ: ಅಮಿತ್ ಶಾ

Update: 2020-01-03 15:31 GMT

ಜೋಧಪುರ,ಜ.3: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯು ಅಲ್ಪಸಂಖ್ಯಾತರ ವಿರುದ್ಧವಾಗಿಲ್ಲ ಮತ್ತು ಅದನ್ನು ಹಿಂಗೆದುಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಶುಕ್ರವಾರ ಇಲ್ಲಿ ಪುನರುಚ್ಚರಿಸಿದರು.

ಸಿಎಎ ಕುರಿತು ಬಿಜೆಪಿಯ ಪ್ರಚಾರಾಂದೋಲನದ ಅಂಗವಾಗಿ ಇಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಶಾ, ಪ್ರತಿಪಕ್ಷಗಳು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಸಿಎಎ ವಿರುದ್ಧ ಪ್ರತಿಭಟನೆಗಳನ್ನು ಪ್ರಚೋದಿಸುತ್ತಿವೆ ಎಂದು ಆರೋಪಿಸಿದರು. ಕಾಂಗ್ರೆಸ್,ಟಿಎಂಸಿ,ಎಸ್‌ಪಿ ಮತ್ತು ಬಿಎಸ್‌ಪಿ ಸೇರಿದಂತೆ ಪ್ರತಿಪಕ್ಷಗಳು ಕಾಯ್ದೆಯನ್ನು ವಿರೋಧಿಸುತ್ತಿವೆ ಮತ್ತು ಸುಳ್ಳುಗಳನ್ನು ಹರಡುತ್ತಿವೆ ಎಂದರು.

 ‘ನಿಮಗೆ ಧೈರ್ಯವಿದ್ದರೆ ಬನ್ನಿ,ನನ್ನೊಂದಿಗೆ ಚರ್ಚಿಸಿ. ಸಾಧ್ಯವಿಲ್ಲವಾದರೆ ನೀವು ಕಾಯ್ದೆಯನ್ನು ಓದಲು ಸಾಧ್ಯವಾಗುವಂತೆ ಅದನ್ನು ಇಟಾಲಿಯನ್ ಭಾಷೆಗೆ ಅನುವಾದಿಸಲು ನಾನು ಸಿದ್ಧನಿದ್ದೇನೆ’  ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ದಾಳಿ ನಡೆಸಿದ ಶಾ,‘ ಕಾಂಗ್ರೆಸ್ ಪಕ್ಷವು ಸಿಎಎ ವಿರುದ್ಧ ಅಪಪ್ರಚಾರವನ್ನು ನಡೆಸುತ್ತಿದೆ. ಯುವಜನರನ್ನು ದಾರಿ ತಪ್ಪಿಸಲಾಗಿದೆ ಮತ್ತು ಅವರು ಪ್ರತಿಭಟನೆಗಾಗಿ ಬೀದಿಗಿಳಿದಿದ್ದಾರೆ. ಅವರು ಎಷ್ಟೇ ಸುಳ್ಳುಗಳನ್ನು ಹರಡಲಿ,ನಾವು ಕಠಿಣವಾಗಿ ಶ್ರಮಿಸುತ್ತೇವೆ ಮತ್ತು ಅಲ್ಪಸಂಖ್ಯಾತರು ಹಾಗೂ ಯುವಜನರನ್ನು ತಲುಪುತ್ತೇವೆ ’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News