ಪಾಕಿಸ್ತಾನ: ಸಿಖ್ಖರ ಗುರುದ್ವಾರದ ಮೇಲೆ ದುಷ್ಕರ್ಮಿಗಳಿಂದ ಕಲ್ಲುತೂರಾಟ
Update: 2020-01-03 21:06 IST
ಅಮೃತಸರ: ಸಿಖ್ಖರ ನಾಯಕ ಗುರು ನಾನಕ ದೇವ್ ಅವರ ಗುರುದ್ವಾರ ನಂಕಾನ ಸಾಹಿಬ್ ಮೇಲೆ ದುಷ್ಕರ್ಮಿಗಳ ತಂಡವೊಂದು ಕಲ್ಲುತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ. ಪಾಕಿಸ್ತಾನದ ಪ್ರಸಿದ್ಧ ಗುರುದ್ವಾರದಲ್ಲಿ ಈ ಘಟನೆ ನಡೆದಿದೆ.
ಮುಸ್ಲಿಂ ಯುವಕನೊಬ್ಬನ ಜೊತೆ ಸಿಖ್ ಯುವತಿ ವಿವಾಹವಾಗಿದ್ದಕ್ಕೆ ಮತ್ತು ಆಕೆಯನ್ನು ಬಲವಂತವಾಗಿ ಮತಾಂತರಿಸಲಾಗಿದೆ ಎಂದು ಸಿಖ್ಖರು ವಿರೋಧ ವ್ಯಕ್ತಪಡಿಸಿದ್ದರು. ಈ ಘಟನೆಯೇ ಮುಸ್ಲಿಮರು ಮತ್ತು ಸಿಖ್ಖರ ನಡುವಿನ ಕಲಹಕ್ಕೆ ಕಾರಣವಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಗುರುದ್ವಾರವನ್ನು ಸುತ್ತುವರಿದ ದುಷ್ಕರ್ಮಿಗಳು ಕಲ್ಲುತೂರಾಟ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಯನ್ನು ಭಾರತವು ತೀವ್ರವಾಗಿ ಖಂಡಿಸಿದೆ. "ಸಿಖ್ ಸಮುದಾಯದ ಜನರ ಸುರಕ್ಷತೆ, ಭದ್ರತೆಗಾಗಿ ಪಾಕ್ ಸರಕಾರವು ಕ್ರಮ ಕೈಗೊಳ್ಳಬೇಕು ಎಂದು ನಾವು ಆಗ್ರಹಿಸಿದ್ದೇವೆ" ಎಂದು ಭಾರತ ಸರಕಾರದ ಪ್ರಕಟನೆ ತಿಳಿಸಿದೆ.