ಉನ್ನಾವೊ ಯುವತಿಯ ಅತ್ಯಾಚಾರ, ಹತ್ಯೆ ಪ್ರಕರಣ: ಪೊಲೀಸರಿಂದ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ

Update: 2020-01-03 16:26 GMT

ಉನ್ನಾವೊ, ಡಿ. 3: ಉನ್ನಾವೊದ 23 ವರ್ಷದ ಅತ್ಯಾಚಾರ ಸಂತ್ರಸ್ತೆ ಐವರಿಂದ ದಹನಕ್ಕೊಳಗಾಗಿ ಹತ್ಯೆಯಾದ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶದ ಪೊಲೀಸರು ಇಲ್ಲಿನ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪ ಪಟ್ಟಿಯನ್ನು ಬುಧವಾರ ಸಲ್ಲಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸಿದ ತಂಡದ ನೇತೃತ್ವ ವಹಿಸಿದ್ದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿನೋದ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಐವರು ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳು ಇವೆ. ಈ ಪುರಾವೆಗಳ ಆಧಾರದಲ್ಲಿ ಆರೋಪ ಪಟ್ಟಿ ಸಿದ್ದಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಐವರಿಂದ ದಹನಕ್ಕೊಳಗಾಗಿ ಶೇ. 90ರಷ್ಟು ಗಾಯಗೊಂಡಿದ್ದ 23 ವರ್ಷದ ಅತ್ಯಾಚಾರ ಸಂತ್ರಸ್ತೆಯನ್ನು ವಿಮಾನದ ಮೂಲಕ ಕೊಂಡೊಯ್ದು ದಿಲ್ಲಿಯ ಸಫ್ದರ್‌ ಜಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅವರು 2019 ಡಿಸೆಂಬರ್ 6ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು.

ಅತ್ಯಾಚಾರ ಪ್ರಕರಣದ ಕುರಿತು ನ್ಯಾಯಾಲಯದ ವಿಚಾರಣೆಗೆ ಹಾಜರಾಗಲು ಡಿಸೆಂಬರ್ 5ರಂದು ರಾಯ್‌ಬರೇಲಿಗೆ ತೆರಳುತ್ತಿದ್ದ ಅತ್ಯಾಚಾರ ಸಂತ್ರಸ್ತೆಯನ್ನು ಆಕೆಯ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಸೇರಿದಂತೆ ಐವರು ಬೆಂಕಿ ಹಚ್ಚಿದ್ದರು. ನ್ಯಾಯಾಲಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ತನ್ನ ಮನೆಯ ಸಮೀಪದ ಗೌರಾ ತಿರುವಿನಲ್ಲಿ ಐವರು ಬೆಂಕಿ ಹಚ್ಚಿದರು ಎಂದು ಯುವತಿ ಉಪ ವಿಭಾಗೀಯ ದಂಡಾಧಿಕಾರಿ ದಯಾಶಂಕರ್ ಪಾಠಕ್ ಅವರಲ್ಲಿ ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News