ಪಿಲಿಕುಳ: ​ಮೂಲ ವಿಜ್ಞಾನ ಮನೋಭಾವ ಉತ್ತೇಜನೆಯ ಸ್ಪರ್ಧೆಗೆ ಚಾಲನೆ

Update: 2020-01-03 18:10 GMT

ಪಿಲಿಕುಳ, ಜ.3: ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ (ಮಂಗಳೂರು) ಮತ್ತು ಕರ್ನಾಟಕ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡಮಿ(ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ) ಜಂಟಿ ಆಶ್ರಯದಲ್ಲಿ ಪಿಲಿಕುಳ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾದ ಎರಡು ದಿನಗಳ ಮೈಸೂರು ವಿಭಾಗ ಮಟ್ಟದ ಕಾಲೇಜು ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ವಿಜ್ಞಾನ ವಿದ್ಯಾರ್ಥಿಗಳ ಮೂಲ ವಿಜ್ಞಾನ ಮನೋಭಾವ ಉತ್ತೇಜನೆಯ ಸ್ಪರ್ಧಾ ಕಾರ್ಯಕ್ರಮವನ್ನು ಶುಕ್ರವಾರ ಪಿಲಿಕುಳ ನಿಸರ್ಗಧಾಮದ ಕಾರ್ಯಕಾರಿ ನಿರ್ದೇಶಕಿ ಮೇಘನಾ ಆರ್. ಉದ್ಘಾಟಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಈ ಸ್ಪರ್ಧೆ ಇಲ್ಲಿ ನಡೆಯುತ್ತಿರುವುದು ಇದೇ ಪ್ರಥಮ. ಸ್ಪರ್ಧೆಗೆ ನಿರೀಕ್ಷೆಗೂ ಮೀರಿ ಅಧಿಕ ಸಂಖ್ಯೆಯ ಯುವ ವಿಜ್ಞಾನ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ವೈಜ್ಞಾನಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ. ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಪಿಲಿಕುಳದ ‘ಬ್ರಾಂಡ್ ಅಂಬಾಸೀಡರ್’(ರಾಯಭಾರಿ) ಆಗಿದ್ದು, ಇಲ್ಲಿನ ವಿಶೇಷತೆ ಹೊತ್ತುಕೊಂಡು ಹೋಗಬೇಕು ಎಂದರು.

ವೇದಿಕೆಯಲ್ಲಿ ಡಾ.ರಾವ್, ಮೇಘನಾ, ಉಪನ್ಯಾಸಕ ಡಾ. ರಾಜೇಶ್ ಕುಮಾರ್ ಶೆಟ್ಟಿ, ಡಾ. ರಮಾನಂದ ಉಪಸ್ಥಿತರಿದ್ದರು.
ವಿಜ್ಞಾನ ಕೇಂದ್ರದ ಅಧಿಕಾರಿ ರಾಮಕೃಷ್ಣ ಮರಾಠೆ ಸ್ವಾಗತಿಸಿದರು. ಕೇಂದ್ರದ ಕ್ಯುರೇಟರ್ ಜಗನ್ನಾಥ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಶರಣಯ್ಯ ವಂದಿಸಿದರು.

*ಮೈಸೂರು ವಿಭಾಗ ಮಟ್ಟದಿಂದ ಮಂಗಳೂರು, ಕಡಬ, ಪುತ್ತೂರು, ಕುಂದಾಪುರ, ಬೈಂದೂರು, ಉಡುಪಿ, ಹಾಸನ, ಮೈಸೂರು, ಶೃಂಗೇರಿ, ಬೆಟ್ಟಂಪಾಡಿ, ಮೂಲ್ಕಿಯಿಂದ 19 ಪದವಿ ಕಾಲೇಜುಗಳು ಮತ್ತು ಪುತ್ತೂರು, ಉಡುಪಿಯ ಮೂರು ಸ್ನಾತಕೋತ್ತರ ಪದವಿ ಕಾಲೇಜುಗಳ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾವಹಿಸಿದ್ದಾರೆ. ನಾಟಕ, ರಸಪ್ರಶ್ನೆ, ಗಣಿತ ಮಾಡೆಲಿಂಗ್, ಡ್ರಾಯಿಂಗ್ ಮತ್ತು ಪ್ರಬಂಧ ವಿಷಯಗಳು ಸ್ಪರ್ಧೆಯಲ್ಲಿ ಒಳಗೊಂಡಿವೆ. ವಿವಿಧ ವಿಭಾಗಗಳಲ್ಲಿ 17 ಮಂದಿ ತೀರ್ಪುಗಾರರಾಗಿ ಸಹಕರಿಸಲಿದ್ದಾರೆ. ಇಲ್ಲಿ ಪ್ರಶಸ್ತಿ ಗಳಿಸುವ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News