‘ಬಾಯಾರಿಕೆಯಾದರೆ ಮೂತ್ರ ಕುಡಿಯಿರಿ’ ಎಂದ ಪೊಲೀಸರು: ಮದ್ರಸ ವಿದ್ಯಾರ್ಥಿಗಳ ಆರೋಪ

Update: 2020-01-04 17:15 GMT
ಸಾಂದರ್ಭಿಕ ಚಿತ್ರ

ಲಕ್ನೊ, ಜ.4: ಡಿಸೆಂಬರ್ 20ರಂದು ಉತ್ತರಪ್ರದೇಶದ ಮುಝಫರ್‌ನಗರದಲ್ಲಿ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ ಸಂದರ್ಭ ಪೊಲೀಸರು ಬಂಧಿಸಿದ್ದ ಮದ್ರಸದ ವಿದ್ಯಾರ್ಥಿಗಳ ಮೇಲೆ ಪೊಲೀಸರು ತೀವ್ರ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

 ಡಿಸೆಂಬರ್ 20ರಂದು ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಗಲಭೆಕೋರರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಕನಿಷ್ಟ 20 ಪೊಲೀಸರು ನಗರದ ಆರ್ಯ ಸಮಾಜ ರಸ್ತೆಯಲ್ಲಿರುವ ಸಾದತ್ ಮದ್ರಸಕ್ಕೆ (ಮದ್ರಸ ಮತ್ತು ಹಾಸ್ಟೆಲ್) ನುಗ್ಗಿ ಅಲ್ಲಿದ್ದ 35 ವಿದ್ಯಾರ್ಥಿಗಳನ್ನು ಮತ್ತು ಧರ್ಮಗುರು ಮೌಲಾನಾ ಅಸದ್ ಹುಸೈನ್‌ರನ್ನು ಬಂಧಿಸಿದ್ದಾರೆ ಎಂದು ಮದ್ರಸದ ಆಡಳಿತ ವರ್ಗ ಮತ್ತು ವಿದ್ಯಾರ್ಥಿಗಳ ಕುಟುಂಬದವರು ಆರೋಪಿಸಿದ್ದಾರೆ.

ಜೈಲಿನಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು ಲಾಠಿಯಿಂದ ನಿರ್ದಯವಾಗಿ ಥಳಿಸಿದ್ದಾರೆ. ಹಲವರು ನಡೆದಾಡಲೂ ಅಸಮರ್ಥರಾಗಿದ್ದಾರೆ. ಕುಡಿಯಲು ನೀರು ಕೇಳಿದಾಗ, ‘ಬಾಯಾರಿಕೆಯಾಗಿದ್ದರೆ ಮೂತ್ರ ಕುಡಿಯುವಂತೆ’ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. 21 ವರ್ಷದ ಇರ್ಫಾನ್ ಹೈದರ್ ಎಂಬ ವಿದ್ಯಾರ್ಥಿಯ ಬಲಕಾಲು ಮತ್ತು ಎಡಗೈ ಮುರಿದಿದ್ದು ಈಗ ಆತ ಗಾಲಿಕುರ್ಚಿಯ ಆಶ್ರಯ ಪಡೆಯಬೇಕಾಗಿದೆ. ಪೊಲೀಸರು ಕರುಣೆಯಿಲ್ಲದವರಂತೆ ನಿರಂತರ ಹಲ್ಲೆ ನಡೆಸಿದ್ದರು ಎಂದು ಇರ್ಫಾನ್ ಆರೋಪಿಸಿದ್ದಾನೆ.

ಆದರೆ ಆರೋಪವನ್ನು ನಿರಾಕರಿಸಿರುವ ಮುಝಫರ್‌ನಗರ ಹಿರಿಯ ಪೊಲೀಸ್ ಅಧೀಕ್ಷಕ ಅಭಿಷೇಕ್ ಯಾದವ್, ಪ್ರತಿಭಟನೆ ಸಂದರ್ಭ ಒಂದು ಗುಂಪು ಹಾಸ್ಟೆಲ್‌ಗೆ ನುಗ್ಗಿದೆ. ಅವರನ್ನು ಬೆನ್ನಟ್ಟಿದ ಪೊಲೀಸರು ಹಾಸ್ಟೆಲ್ ಪ್ರವೇಶಿಸಿ ಅವರನ್ನು ಬಂಧಿಸಿದ್ದಾರೆ. ಈ ಸಂದರ್ಭ ಮೌಲಾನಾರನ್ನು ಹಾಗೂ ಕೆಲವು ವಿದ್ಯಾರ್ಥಿಗಳನ್ನೂ ಬಂಧಿಸಲಾಗಿತ್ತು. ಅವರು ಮದ್ರಸಾದ ವಿದ್ಯಾರ್ಥಿಗಳು ಎಂದು ತಿಳಿಯುತ್ತಿದ್ದಂತೆಯೇ ಮೌಲಾನಾರನ್ನು ಹಾಗೂ 28 ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದೇವೆ. ಬಳಿಕ ಮತ್ತೆ ನಾಲ್ಕು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಇನ್ನೂ ಕೆಲವು ವಿದ್ಯಾರ್ಥಿಗಳು ಕಸ್ಟಡಿಯಲ್ಲಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕಸ್ಟಡಿಯಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡಿದರೆ ಅವರನ್ನೂ ಬಿಡುಗಡೆ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ ಪೊಲೀಸ್ ಕಸ್ಟಡಿಯಲ್ಲಿ ಥಳಿಸಿಲ್ಲ. ಮದರಸದ ಒಳಗೆ ಪ್ರತಿಭಟನಾಕಾರರು ವಿದ್ಯಾರ್ಥಿಗಳ ಹಿಂದೆ ಅವಿತಿದ್ದರಿಂದ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News